ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ವಾಯುಪಡೆಗೆ ದೇಶೀಯವಾಗಿ ನಿರ್ಮಿಸಲಾದ ‘ತೇಜಸ್’ ಲಘು ಯುದ್ಧ ವಿಮಾನಗಳ ಯಶಸ್ವಿ ಸೇರ್ಪಡೆಯ ನಂತರ, ಭಾರತ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಕೇಂದ್ರ ಸರ್ಕಾರವು ₹15,000 ಕೋಟಿ ವೆಚ್ಚದಲ್ಲಿ 5ನೇ ತಲೆಮಾರಿನ ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನ ಯೋಜನೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿರುವ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬೃಹತ್ ಆಫರ್ ಒಂದನ್ನು ನೀಡಿದ್ದಾರೆ.
ಸುಖೋಯ್ Su-57 ಜಂಟಿ ಅಭಿವೃದ್ಧಿಗೆ ರಷ್ಯಾ ಸಿದ್ಧ
ವಿಶ್ವದ ಅತ್ಯಾಧುನಿಕ 5ನೇ ತಲೆಮಾರಿನ ಸ್ಟೆಲ್ತ್ ಯುದ್ಧವಿಮಾನವಾದ ಸುಖೋಯ್ Su-57 (Sukhoi Su-57) ಅನ್ನು ಭಾರತಕ್ಕೆ ಪೂರೈಸಲು ಮಾತ್ರವಲ್ಲದೆ, ಅದರ ನಿರ್ಣಾಯಕ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ರಷ್ಯಾ ಸಿದ್ಧವಿದೆ ಎಂದು ಪುಟಿನ್ ಪ್ರಕಟಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದೊಂದಿಗೆ ಜಂಟಿಯಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ನಮಗೆ ಯಾವುದೇ ಅಭ್ಯಂತರವಿಲ್ಲ ಮತ್ತು ಇದು ಎರಡೂ ದೇಶಗಳ ರಕ್ಷಣಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಪಾಕ್, ಚೀನಾಗೆ ಭಾರತದ ಟಕ್ಕರ್
ಚೀನಾ ಮತ್ತು ಪಾಕಿಸ್ತಾನದ ಗಡಿ ಸವಾಲುಗಳನ್ನು ಎದುರಿಸಲು ಭಾರತವು ತನ್ನ ವಾಯುಸೇನೆಯನ್ನು ಬಲಪಡಿಸುತ್ತಿದೆ. ಸದ್ಯ ಭಾರತದ ಸ್ವದೇಶಿ AMCA ಯೋಜನೆ ಅಭಿವೃದ್ಧಿ ಹಂತದಲ್ಲಿದ್ದು, 2030ರ ದಶಕದ ಮಧ್ಯಭಾಗದಲ್ಲಿ ಇದು ವಾಯುಪಡೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ರಷ್ಯಾದ ಈ ಆಫರ್ ಭಾರತದ ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ.



