June 5, 2026
Friday, June 5, 2026
spot_img

ಖಾತೆ ಕಿತ್ತಾಟಕ್ಕೆ ಕಾಂಗ್ರೆಸ್‌ನಲ್ಲಿ ಮೊದಲ ಬಿರುಕು: ರಾಜೀನಾಮೆ ಸಂಚಲನದ ಬೆನ್ನಲ್ಲೇ ಹೈಕಮಾಂಡ್ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಚಿವ ಖಾತೆ ಹಂಚಿಕೆ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕೆಲ ಸಚಿವರಲ್ಲಿ ಅಸಮಾಧಾನ ವ್ಯಕ್ತವಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದೆ ಎನ್ನಲಾಗುತ್ತಿದೆ.

ರಾಮಲಿಂಗಾರೆಡ್ಡಿ ರಾಜೀನಾಮೆ ಸಂಚಲನ

ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಬಳಿಕ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅಸಮಾಧಾನಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸರ್ಕಾರ ರಚನೆಯಾದ ಆರಂಭಿಕ ಹಂತದಲ್ಲೇ ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮುನಿಯಪ್ಪ ಅಸಮಾಧಾನವೂ ಬಹಿರಂಗ

ರಾಮಲಿಂಗಾರೆಡ್ಡಿ ಮಾತ್ರವಲ್ಲದೆ, ಸಚಿವ ಕೆ.ಹೆಚ್. ಮುನಿಯಪ್ಪ ಕೂಡ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದು ವರದಿಯಾಗಿದೆ. ಇದರಿಂದ ಹೊಸ ಸರ್ಕಾರದಲ್ಲಿ ಎಲ್ಲವೂ ಸುಗಮವಾಗಿ ಸಾಗುತ್ತಿಲ್ಲ ಎಂಬ ಸಂದೇಶ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:

ರಾಹುಲ್ ಗಾಂಧಿಗೆ ತಲುಪಿದ ವರದಿ

ರಾಜ್ಯದ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಪಕ್ಷದ ಉಸ್ತುವಾರಿ ನಾಯಕರು ಅಸಮಾಧಾನದ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದು, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಜೊತೆಗೆ ಮನವೊಲಿಸಿ, ಮನವೊಲಿಕೆಗೆ ಬಗ್ಗದಿದ್ದರೆ ರಾಜೀನಾಮೆ ಅಂಗೀಕರಿಸಿ ಎಂದು ಕಡ್ಡಿಮುರಿದಂತೆ ರಾಜ್ಯ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮನವೊಲಿಕೆಗೆ ಮುಂದಾದ ನಾಯಕರು

ಅಸಮಾಧಾನಗೊಂಡ ನಾಯಕರನ್ನು ಮನವೊಲಿಸಲು ರಾಜ್ಯ ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ದೊಡ್ಡ ಮಟ್ಟಕ್ಕೆ ಹೋಗದಂತೆ ಸಂಧಾನದ ರಾಜಕೀಯ ನಡೆಯುತ್ತಿದೆ ಎಂದು ಮೂಲಗಳು ಹೇಳುತ್ತಿವೆ.

ಸಂಪರ್ಕಕ್ಕೆ ಸಿಗದ ರಾಮಲಿಂಗಾರೆಡ್ಡಿ

ರಾಜೀನಾಮೆ ಸುದ್ದಿಯ ಬಳಿಕ ರಾಮಲಿಂಗಾರೆಡ್ಡಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅವರನ್ನು ಸಂಪರ್ಕಿಸಲು ಹಲವು ನಾಯಕರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎನ್ನಲಾಗಿದ್ದು, ಈ ಬೆಳವಣಿಗೆ ಕುತೂಹಲ ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !