July 28, 2026
Tuesday, July 28, 2026
spot_img

ಟೀಮ್ ಇಂಡಿಯಾಗೆ ಬಿಗ್ ಶಾಕ್! ಅಫ್ಘಾನಿಸ್ತಾನ ಮಾತ್ರವಲ್ಲ, ಇಂಗ್ಲೆಂಡ್ ಸರಣಿಯಿಂದಲೂ ಕೊಹ್ಲಿ ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಮುಗಿದ ಬೆನ್ನಲ್ಲೇ ರನ್‌ ಮಷೀನ್ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮತ್ತು ಕೋಚ್ ಗೌತಮ್ ಗಂಭೀರ್ ಗೆ ಭಾರಿ ತಲೆನೋವು ತಂದಿಟ್ಟಿದೆ.

ಜೂನ್ 13 ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಈಗಾಗಲೇ ಹೊರಬಿದ್ದಿರುವ ಕೊಹ್ಲಿ, ಈಗ ಜುಲೈನಲ್ಲಿ ನಡೆಯಲಿರುವ ಹೈ-ಪ್ರೊಫೈಲ್ ಇಂಗ್ಲೆಂಡ್ ಪ್ರವಾಸಕ್ಕೂ ಅಲಭ್ಯರಾಗುವ ಭೀತಿ ಎದುರಾಗಿದೆ.

ಐಪಿಎಲ್ ಫೈನಲ್ ಪಂದ್ಯದಲ್ಲಿ ಆಗಿದ್ದೇನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸತತ ಎರಡನೇ ಬಾರಿ ಚಾಂಪಿಯನ್ ಮಾಡಲು ವಿರಾಟ್ ಕೊಹ್ಲಿ ತಮ್ಮ ದೇಹವನ್ನು ದಂಡಿಸಿದ್ದರು. ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಜೇಯ 75 ರನ್ ಗಳಿಸುವಾಗ ಅವರ ಬಲಗಾಲಿನ ಹ್ಯಾಮ್‌ಸ್ಟ್ರಿಂಗ್‌ಗೆ ತೀವ್ರವಾದ ಪೆಟ್ಟಾಗಿತ್ತು. ನೋವಿನ ನಡುವೆಯೂ ಬ್ಯಾಂಡೇಜ್ ಕಟ್ಟಿಕೊಂಡು ಪಂದ್ಯ ಮುಗಿಸಿದ್ದ ಕೊಹ್ಲಿ ಎಂಆರ್‌ಐ ಸ್ಕ್ಯಾನ್ ವರದಿಗಳು ಈಗ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿವೆ.

ಇದನ್ನೂ ಓದಿ:

ಆರು ವಾರಗಳ ಕಾಲ ಕಡ್ಡಾಯ ವಿಶ್ರಾಂತಿ

ಕೊಹ್ಲಿ ಬಲಗಾಲಿನಲ್ಲಿ ‘ಡಿಸ್ಟಲ್ ಸೆಮಿಮೆಂಬ್ರಾನೋಸಸ್ ಟೆಂಡನ್ ಟೇರ್’ ಆಗಿರುವುದು ದೃಢಪಟ್ಟಿದೆ. ಅದೃಷ್ಟವಶಾತ್ ಈ ಗಾಯಕ್ಕೆ ಯಾವುದೇ ಸರ್ಜರಿಯ ಅಗತ್ಯವಿಲ್ಲ ಎಂದು ಮುಂಬೈನ ಪ್ರಖ್ಯಾತ ಮೂಳೆ ತಜ್ಞ ಡಾ. ದಿನಶಾ ಪರ್ದಿವಾಲಾ ಸ್ಪಷ್ಟಪಡಿಸಿದ್ದಾರೆ. ಕೊಹ್ಲಿ ಗುಣಮುಖರಾಗಲು ಕನಿಷ್ಠ 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಮತ್ತು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ (CoE) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಬೇಕಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಕಂಟಕ?

ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಜುಲೈ 14 ರಿಂದ ಬರ್ಮಿಂಗ್ಹ್ಯಾಮ್‌ನಲ್ಲಿ ಆರಂಭವಾಗಲಿದೆ. ಆದರೆ ಕೊಹ್ಲಿ ಜುಲೈ ಮೊದಲ ವಾರದವರೆಗೂ ಬ್ಯಾಟ್ ಹಿಡಿಯುವಂತಿಲ್ಲ. ಹೀಗಾಗಿ ಅವರು ಮ್ಯಾಚ್ ಫಿಟ್‌ನೆಸ್ ಗಳಿಸಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವುದು ಅನುಮಾನ ಎನ್ನಲಾಗುತ್ತಿದೆ. ಸದ್ಯ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿರುವುದರಿಂದ, ಈ ಇಂಜುರಿ ಅವರ 2027ರ ವಿಶ್ವಕಪ್ ಸಿದ್ಧತೆಗೆ ದೊಡ್ಡ ಹಿನ್ನಡೆ ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !