ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನವರು ವಾಹನ ಪ್ರಿಯರು, ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ನಾಲ್ಕು ಗಾಡಿ, ಒಂದು ಅಥವಾ ಎರಡು ಕಾರನ್ನು ಇಟ್ಟುಕೊಂಡಿರುತ್ತಾರೆ. ಎಲ್ಲವನ್ನೂ ರಸ್ತೆಗೆ ಇಳಿಸ್ತಾರೆ, ಹೀಗೆ ಮಾಲೀನ್ಯ ಹೆಚ್ಚಾಗ್ತಾ ಹೋಗುತ್ತದೆ. ಇದನ್ನು ತಪ್ಪಿಸೋಕೆ ಸಾಧ್ಯವಾಗದ ಕಾರಣ ಹೆಚ್ಚು ಗಿಡಗಳನ್ನು ನೆಟ್ಟು ಉಸಿರಾಡೋ ಗಾಳಿಯನ್ನು ಸ್ವಚ್ಛವಾಗಿ ಇಡಬೇಕಾಗಿದೆ. ಇಲ್ಲವಾದರೆ ಕೆಲವೇ ದಿನಗಳಲ್ಲಿ ನಮ್ಮ ಊರು ದೆಹಲಿಯಂತೆ ಬದಲಾಗಲಿದೆ!
ನಮ್ಮ ಮೆಟ್ರೋ ವತಿಯಿಂದ ಪರಿಸರ ದಿನದಂದು ಎರಡು ಲಕ್ಷ ಗಿಡಗಳನ್ನು ನೆಡುತ್ತೇವೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಮೆಟ್ರೋ ಕಾಮಗಾರಿಗಾಗಿ ಸಾಕಷ್ಟು ಮರಗಳಿಗೆ ಕೊಡಲಿ ಹಾಕಲಾಗಿತ್ತು. ಇದೆಲ್ಲವನ್ನೂ ಮನದಲ್ಲಿಟ್ಟುಕೊಂಡು, ಇದೀಗ ನಮ್ಮ ಮೆಟ್ರೋ ವಿವಿಧ ಮೆಟ್ರೋ ಕಾರಿಡಾರ್‌ಗಳಲ್ಲಿ ಒಟ್ಟಾರೆ ಎರಡು ಲಕ್ಷ ಗಿಡಗಳನ್ನು ನೆಡಲು ನಿರ್ಧರಿಸಿದೆ.
ಬೆಂಗಳೂರಿನ ರಸ್ತೆಗಳಿಗೆ ಪ್ರತಿದಿನ ಸುಮಾರು ಎರಡು ಸಾವಿರ ಹೊಸ ವಾಹನಗಳು ಇಳಿಯುತ್ತಿವೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಹೊರಸೂಸುವ ವಿಷಕಾರಿ ಅನಿಲ ನಗರದ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಬಿಎಂಆರ್‌ಸಿಎಲ್, ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ ಪ್ರಮುಖ ನಿಲ್ದಾಣಗಳಾದ ಆರ್.ವಿ. ರಸ್ತೆ, ಬಿಟಿಎಂ ಲೇಔಟ್, ರಾಗಿಗುಡ್ಡ, ಜಯದೇವ ಆಸ್ಪತ್ರೆ ಹಾಗೂ ಮಾದಾವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗದ ಹಸಿರು ಲೈನಿನಲ್ಲಿ ಬರುವ ಜೆ.ಪಿ. ನಗರ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಗಿಡಗಳನ್ನು ನೆಡಲು ಸಿದ್ಧತೆ ನಡೆಸಿದೆ.



