ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ತಾರಕಕ್ಕೇರಿದೆ. ಖಾತೆ ಹಂಚಿಕೆ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿರುವ ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಹೈಡ್ರಾಮಾ ಇಂದು ಕೂಡ ಮುಂದುವರಿದಿದೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರೆಡ್ಡಿ, ನನ್ನ ನಿರ್ಧಾರವನ್ನು ನಾನು ಈಗಾಗಲೇ ಹೈಕಮಾಂಡ್‌ಗೆ ತಿಳಿಸಿದ್ದೇನೆ, ಈಗ ಅವರೇನು ಮಾಡ್ತಾರೋ ನೋಡೋಣ ಎಂದು ನೇರ ಸವಾಲು ಹಾಕುವ ಮೂಲಕ ದೆಹಲಿ ನಾಯಕರಿಗೂ ನಡುಕ ಹುಟ್ಟಿಸಿದ್ದಾರೆ.
ಮಧ್ಯರಾತ್ರಿಯ ಹೈ-ವೋಲ್ಟೇಜ್ ಸಂಧಾನ ವಿಫಲ?
ಶುಕ್ರವಾರ ತಡರಾತ್ರಿಯವರೆಗೂ ಸಿಎಂ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ ಮನವೊಲಿಸಲು ಹರಸಾಹಸ ಪಟ್ಟಿದ್ದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಂದಲೂ ಫೋನ್ ಮೂಲಕ ಮಾತನಾಡಿಸಿದ್ದರು. ಹಿರಿಯ ನಾಯಕರ ನಿರಂತರ ಒತ್ತಡದ ಹಿನ್ನೆಲೆಯಲ್ಲಿ, “ನನ್ನ ಅಂತಿಮ ತೀರ್ಮಾನವನ್ನು ಇಂದು (ಶನಿವಾರ) ತಿಳಿಸುತ್ತೇನೆ” ಎಂದು ಹೇಳಿ ರೆಡ್ಡಿ ಸಭೆಯಿಂದ ಹೊರನಡೆದಿದ್ದರು.
ರೆಡ್ಡಿ ನಿವಾಸದಲ್ಲಿ ಬೆಂಬಲಿಗರ ಸಭೆ
ಇಂದು ಮುಂಜಾನೆಯಿಂದಲೇ ರಾಮಲಿಂಗಾರೆಡ್ಡಿಯ ಬೆಂಗಳೂರಿನ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ತಮ್ಮ ಮುಂದಿನ ರಾಜಕೀಯ ಹೆಜ್ಜೆಯನ್ನು ನಿರ್ಧರಿಸಲು ರೆಡ್ಡಿ ತಮ್ಮ ಕೋರ್ ಕಮಿಟಿ ಬೆಂಬಲಿಗರನ್ನು ಮನೆಗೆ ಕರೆಸಿಕೊಂಡಿದ್ದಾರೆ. ಬೆಂಗಳೂರಿನ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಸೇರಿದಂತೆ ನಗರದ ಪ್ರಮುಖ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಪೊರೇಟರ್‌ಗಳು ಈಗಾಗಲೇ ರೆಡ್ಡಿ ನಿವಾಸಕ್ಕೆ ಧಾವಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿರುವ ರಾಮಲಿಂಗಾರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದು, ಸಭೆಯ ಬಳಿಕ ಜಂಟಿ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಡಿಕೆಶಿ ಸರ್ಕಾರಕ್ಕೆ ಎದುರಾದ ಮೊದಲ ಅಗ್ನಿಪರೀಕ್ಷೆ
ಅಧಿಕಾರ ಹಿಡಿದ ಎರಡೇ ದಿನದಲ್ಲಿ ಸಚಿವರೊಬ್ಬರು ಈ ಮಟ್ಟಿಗೆ ಬಂಡಾಯ ಎದ್ದಿರುವುದು ಸಿಎಂ ಡಿ.ಕೆ. ಶಿವಕುಮಾರ್‌ಗೆ ತಲೆನೋವಾಗಿ ಪರಿಣಮಿಸಿದೆ. ರಾಮಲಿಂಗಾರೆಡ್ಡಿ ಬೇಡಿಕೆಗೆ ಮಣಿದು ಖಾತೆ ಬದಲಾಯಿಸಿದರೆ, ಇತರ ಅಸಮಾಧಾನಿತ ನಾಯಕರೂ ಇದೇ ಹಾದಿ ಹಿಡಿಯುವ ಆತಂಕ ಸರ್ಕಾರಕ್ಕಿದೆ. ಇಂದು ಮಧ್ಯಾಹ್ನದೊಳಗೆ ರೆಡ್ಡಿ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬದ್ಧರಾಗಿರುತ್ತಾರೋ ಅಥವಾ ಶಾಂತವಾಗುತ್ತಾರೋ ಎಂಬುದು ಇಡೀ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.



