June 6, 2026
Saturday, June 6, 2026
spot_img

FOOD | ಹೋಟೆಲ್ ಶೈಲಿಯ ಗಮಗಮಿಸುವ ಕಾಜು ಪಲಾವ್: ವಿಶೇಷ ದಿನಗಳ ಊಟಕ್ಕೆ ಪರ್ಫೆಕ್ಟ್ ರೆಸಿಪಿ!

ಮನೆಯಲ್ಲಿ ಯಾವುದಾದರೂ ವಿಶೇಷ ಸಮಾರಂಭಗಳಿದ್ದಾಗ ಅಥವಾ ವೀಕೆಂಡ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಏನಾದರೂ ಸ್ಪೆಷಲ್ ಆಗಿ ಮಾಡಬೇಕು ಅನ್ನಿಸಿದಾಗ ತಕ್ಷಣ ನೆನಪಿಗೆ ಬರುವುದು ಪಲಾವ್. ಆದರೆ ದಿನಾಲೂ ಮಾಡುವ ವೆಜಿಟೇಬಲ್ ಪಲಾವ್ ತಿಂದು ಬೇಸರವಾಗಿದ್ದರೆ, ಈ ಬಾರಿ ರುಚಿಕರವಾದ ಹೋಟೆಲ್ ಶೈಲಿಯ ಕಾಜು ಪಲಾವ್ ಅನ್ನು ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅಕ್ಕಿ
ಗೋಡಂಬಿ (ಕಾಜು)
ತುಪ್ಪ ಮತ್ತು ಎಣ್ಣೆ
ಈರುಳ್ಳಿ
ಹಸಿ ಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಪಲಾವ್ ಎಲೆ
ದಾಲ್ಚಿನ್ನಿ,
ಲವಂಗ,
ಏಲಕ್ಕಿ
ಶಾಹಿ ಜೀರಿಗೆ
ಹಸಿರು ಬಟಾಣಿ
ಪುದೀನಾ ಮತ್ತು ಕೊತ್ತಂಬರಿ ಸೊಪ್ಪು
ನೀರು
ಉಪ್ಪು

ಮಾಡುವ ವಿಧಾನ
ಮೊದಲು ಕುಕ್ಕರ್‌ನಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ ಗೋಡಂಬಿಯನ್ನು ಹೊಂಬಣ್ಣ ಬರುವವರೆಗೆ ಲಘುವಾಗಿ ಹುರಿದು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಬೇಕು. ನಂತರ ಅದೇ ಕುಕ್ಕರ್‌ಗೆ ಉಳಿದ ಎಣ್ಣೆ ಮತ್ತು ತುಪ್ಪ ಹಾಕಿ. 1 ಪಲಾವ್ ಎಲೆ, 1 ಇಂಚು ದಾಲ್ಚಿನ್ನಿ, 3 ಲವಂಗ, 2 ಏಲಕ್ಕಿ, 1 ಚಮಚ ಶಾಹಿ ಜೀರಿಗೆ ಸೇರಿಸಿ ಚಟಪಟ ಎನ್ನುವವರೆಗೆ ಹುರಿದು, ನಂತರ ಹೆಚ್ಚಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಈರುಳ್ಳಿ ಮೃದುವಾಗುವವರೆಗೆ ಫ್ರೈ ಮಾಡಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಬೇಕು.

ಈಗ ಹಸಿರು ಬಟಾಣಿ, ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ 1 ನಿಮಿಷ ಕೈಯಾಡಿಸಿ. ನೆನೆಸಿ ನೀರು ಬಸಿದ ಬಾಸ್ಮತಿ ಅಕ್ಕಿ ಮತ್ತು ಮೊದಲೇ ಹುರಿದಿಟ್ಟುಕೊಂಡ ಗೋಡಂಬಿಯ ಮುಕ್ಕಾಲು ಭಾಗವನ್ನು ಇದಕ್ಕೆ ಸೇರಿಸಿ. ಅಕ್ಕಿಯನ್ನು ಲಘುವಾಗಿ 1 ನಿಮಿಷ ತುಪ್ಪದಲ್ಲಿ ಒಟ್ಟಿಗೆ ಹುರಿಯಬೇಕು. ಬಳಿಕ 3.5 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನೀರು ಕುದಿಯಲು ಆರಂಭಿಸಿದಾಗ ಕುಕ್ಕರ್ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಕೇವಲ 1 ಅಥವಾ 2 ಸೀಟಿ ಕೂಗಿಸಿ ಗ್ಯಾಸ್ ಆಫ್ ಮಾಡಿ. ಕುಕ್ಕರ್ ಪ್ರೆಶರ್ ಇಳಿದ ನಂತರ ಮುಚ್ಚಳ ತೆಗೆದು, ಉಳಿದ ಗೋಡಂಬಿಯನ್ನು ಮೇಲಿಂದ ಉದುರಿಸಿ ಲಘುವಾಗಿ ಮಿಕ್ಸ್ ಮಾಡಿದರೆ ರಿಚ್ ಆದ ಕಾಜು ಪಲಾವ್ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !