June 7, 2026
Sunday, June 7, 2026
spot_img

ಧಾರಾಕಾರ ಮಳೆಗೆ ನಲುಗಿದ ಕಲಬುರಗಿ: ಸೇತುವೆ ಕುಸಿತ, ಹಲವು ಮನೆಗಳು ಜಲಾವೃತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಲಬುರಗಿ ಜಿಲ್ಲೆಯ ಹಲವೆಡೆ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮುಂಗಾರು ಮಳೆಗೆ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಬಳಿ ಇದ್ದ ಕಿರು ಸೇತುವೆಯು ಕುಸಿದು ಬಿದ್ದಿದೆ. ಚಿಮ್ಮನಚೋಡ ಮತ್ತು ನರನಾಳ ಗ್ರಾಮಗಳ ನಡುವೆ ಇದ್ದ ಈ ಸಂಪರ್ಕ ಸೇತುವೆ ಸಂಪೂರ್ಣವಾಗಿ ಕುಸಿದ ಪರಿಣಾಮ, ಚಿಂಚೋಳಿಯಿಂದ ಭಾಲ್ಕಿ ಮಾರ್ಗದ ನಡುವಿನ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ರಸ್ತೆ ಸಂಪರ್ಕ ಕಡಿತ – ಪ್ರಯಾಣಿಕರ ಪರದಾಟ:

ಈ ಹೆದ್ದಾರಿ ಮಾರ್ಗದಲ್ಲಿ ಸೇತುವೆ ಮುರಿದು ಬಿದ್ದಿರುವುದರಿಂದ ಎರಡು ಜಿಲ್ಲೆಗಳ ನಡುವಿನ ನೇರ ಸಂಪರ್ಕ ಕಡಿತಗೊಂಡಿದೆ. ಸಾರಿಗೆ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿವೆ. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾದ ಈ ರಸ್ತೆ ಬಂದ್ ಆಗಿರುವುದರಿಂದ ಸಾರ್ವಜನಿಕರು ಮತ್ತು ನಿತ್ಯ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಅನಿವಾರ್ಯತೆ ಎದುರಾಗಿದ್ದು, ತೀವ್ರ ಪರದಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:

ಗ್ರಾಮಗಳಿಗೆ ನುಗ್ಗಿದ ನೀರು: ಜಲಾವೃತಗೊಂಡ ಮನೆಗಳು

ಮಳೆಯ ಆರ್ಭಟ ಕೇವಲ ರಸ್ತೆ, ಸೇತುವೆಗಳಿಗೆ ಸೀಮಿತವಾಗಿಲ್ಲ. ಚಿಂಚೋಳಿ ತಾಲೂಕಿನ ಬೆಡಕಪಳ್ಳಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ಹಳ್ಳದ ಮಳೆನೀರು ನುಗ್ಗಿದೆ. ಇದ್ದಕ್ಕಿದ್ದಂತೆ ಮನೆಗಳಿಗೆ ನೀರು ನುಗ್ಗಿದ್ದರಿಂದ ಧಾನ್ಯಗಳು, ದಿನಬಳಕೆ ವಸ್ತುಗಳು ಹಾಗೂ ಹಾಸಿಗೆ-ಬಟ್ಟೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಗ್ರಾಮಸ್ಥರು ನೆರವಿಗಾಗಿ ಆಕ್ರಂದನ ಮುಗಿಲು ಮುಟ್ಟಿದೆ.

ಜನರ ಆಕ್ರೋಶ – ತುರ್ತು ಕ್ರಮಕ್ಕೆ ಒತ್ತಾಯ:

ಮಳೆಗಾಲ ಆರಂಭಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ತಾತ್ಕಾಲಿಕ ರಸ್ತೆ ಸಂಪರ್ಕ ಕಲ್ಪಿಸಬೇಕು ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಕನಿಷ್ಠ ಗಂಜಿ ಕೇಂದ್ರ ಮತ್ತು ಪರಿಹಾರದ ವ್ಯವಸ್ಥೆ ಮಾಡಬೇಕು ಎಂದು ಜಲಾವೃತಗೊಂಡ ಗ್ರಾಮಗಳ ಜನರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !