June 7, 2026
Sunday, June 7, 2026
spot_img

ಹಾಸ್ಯ ನಟನೆಯಿಂದ ರಾಷ್ಟ್ರ ಪ್ರಶಸ್ತಿಯವರೆಗೆ: ಮೂರು ದಶಕಗಳ ನಟನಾ ಪಯಣ ಮುಗಿಸಿದ ಸಲೀಂ ಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಲಯಾಳಂ ಚಿತ್ರರಂಗದ ಖ್ಯಾತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಲೀಂ ಕುಮಾರ್ (56) ಶನಿವಾರ ರಾತ್ರಿ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನ್ಯುಮೋನಿಯಾ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದ ಅವರನ್ನು ವೆಂಟಿಲೇಟರ್‌ ಸಪೋರ್ಟ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಹೃದಯಾಘಾತದಿಂದ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಮತ್ತು ಅವರ ಕುಟುಂಬದವರು ಧೃಡಪಡಿಸಿದ್ದಾರೆ.

ಮೂರು ದಶಕಗಳ ಅದ್ಭುತ ನಟನಾ ಪಯಣ

ಮಿಮಿಕ್ರಿ ಕಲಾವಿದನಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದ ಸಲೀಂ ಕುಮಾರ್, ಕಳೆದ ಮೂರು ದಶಕಗಳಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಹಾಸ್ಯ ನಟನಾಗಿ ಪ್ರೇಕ್ಷಕರನ್ನು ಅಪಾರವಾಗಿ ರಂಜಿಸಿದ್ದ ಅವರು, ನಂತರದ ದಿನಗಳಲ್ಲಿ ಗಂಭೀರ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು.

ಇದನ್ನೂ ಓದಿ:

ರಾಷ್ಟ್ರ ಪ್ರಶಸ್ತಿಯ ಗರಿ

2010ರಲ್ಲಿ ತೆರೆಕಂಡ ‘ಆದಾಮಿಂಟೆ ಮಕನ್ ಅಬು’ ಚಿತ್ರದ ಅದ್ಭುತ ನಟನೆಗಾಗಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಒಲಿದುಬಂದಿತ್ತು. ಇದರೊಂದಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಶ್ರೇಷ್ಠ ಕಥೆಗಾರ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು.

ಚಿತ್ರರಂಗದಲ್ಲಿ ಕಂಬನಿ

ಸಲೀಂ ಕುಮಾರ್ ಅವರ ಹಠಾತ್ ನಿಧನಕ್ಕೆ ಮಲಯಾಳಂ ಚಿತ್ರರಂಗದ ದಿಗ್ಗಜರಾದ ಮಮ್ಮುಟ್ಟಿ, ಮೋಹನ್‌ಲಾಲ್ ಸೇರಿದಂತೆ ದಕ್ಷಿಣ ಭಾರತದ ಹಲವು ಗಣ್ಯರು ಹಾಗೂ ರಾಜಕಾರಣಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಅವರ ಸ್ವಗ್ರಾಮವಾದ ಉತ್ತರ ಪರವೂರ್‌ನಲ್ಲಿ ಇರಿಸಲಾಗಿದ್ದು, ಇಂದು (ಭಾನುವಾರ) ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಸುನಿತಾ ಹಾಗೂ ಇಬ್ಬರು ಪುತ್ರರಾದ ಚಂದು ಮತ್ತು ಆರೋಮನ್‌ನ್ನು ಅಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !