ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ರಾಜಕೀಯ ಏಳಿಗೆಗೆ ಕಾರಣರಾದ ತವರು ಕ್ಷೇತ್ರದ ಜನರ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ತಮ್ಮ ವಿನಮ್ರತೆಯನ್ನು ಪ್ರದರ್ಶಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ಭೇಟಿ ನೀಡಿದ ಅವರು, ಬೃಹತ್ ಕೃತಜ್ಞತಾ ಸಮಾವೇಶದಲ್ಲಿ ಜನಾಂದೋಲನವನ್ನುದ್ದೇಶಿಸಿ ಅತ್ಯಂತ ಭಾವನಾತ್ಮಕವಾಗಿ ಮಾತನಾಡಿದರು.
ವಿಧಾನಸೌಧದಲ್ಲಿ ನಾನು ಮುಖ್ಯಮಂತ್ರಿಯಾಗಿರಬಹುದು, ಆದರೆ ನನ್ನನ್ನು ಹೆತ್ತು ಬೆಳೆಸಿದ ಈ ಕನಕಪುರದ ಮಣ್ಣಿನಲ್ಲಿ ನಾನು ಕೇವಲ ನಿಮ್ಮ ಮನೆ ಮಗ ಎಂದು ಹೇಳುವ ಮೂಲಕ ನೆರೆದಿದ್ದ ಸಹಸ್ರಾರು ಜನರ ಹೃದಯ ಗೆದ್ದರು.
ಇದನ್ನೂ ಓದಿ:
ಅಧಿಕಾರ ಬರುತ್ತದೆ, ಹೋಗುತ್ತದೆ; ನಿಮ್ಮ ಪ್ರೀತಿ ಶಾಶ್ವತ:
ವೇದಿಕೆಯ ಮೇಲೆ ಗದ್ಗದಿತರಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜಕೀಯದಲ್ಲಿ ಅಧಿಕಾರ, ಸ್ಥಾನಮಾನಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ಕನಕಪುರದ ಜನತೆ ನನ್ನ ಮೇಲೆ ಇಟ್ಟಿರುವ ದಶಕಗಳ ಕಾಲದ ಪ್ರೀತಿ ಮತ್ತು ವಿಶ್ವಾಸ ಎಂದಿಗೂ ಶಾಶ್ವತವಾದದ್ದು. ನನ್ನ ಕಷ್ಟದ ದಿನಗಳಲ್ಲಿ ನೀವೆಲ್ಲರೂ ನನ್ನ ಬೆನ್ನಿಗೆ ಬಂಡೆಯಂತೆ ನಿಂತಿದ್ದೀರಿ. ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ ಈ ನೆಲವನ್ನು ಮತ್ತು ನಿಮ್ಮ ಕೈ ಹಿಡಿದ ದಿನಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಕ್ಷೇತ್ರದ ಋಣ ತೀರಿಸುವ ಸಂಕಲ್ಪ:
ತಮ್ಮ ಭಾಷಣದ ಉದ್ದಕ್ಕೂ ತಮಗೆ ದಾಖಲೆಯ ಮತಗಳ ಅಂತರದ ಗೆಲುವು ತಂದುಕೊಟ್ಟ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ, ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಧಕ್ಕೆ ತರದೆ, ನಿಮ್ಮ ಮನೆ ಮಗನಾಗಿಯೇ ಈ ಕ್ಷೇತ್ರದ ಋಣವನ್ನು ತೀರಿಸುತ್ತೇನೆ. ಕನಕಪುರ ಕ್ಷೇತ್ರವನ್ನು ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಅಗತ್ಯವಿರುವ ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.



