ಹೊಸ ದಿಗಂತ ವರದಿ, ವಡಗೇರಾ:
ತಾಲೂಕಿನ ಬಸವನಗರ ಗ್ರಾಮದಲ್ಲಿ ಮರಮ್ ಕ್ವಾರಿ ತೆಗ್ಗಿನಲ್ಲಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕಿಯರು ಹಾಗೂ ಅವರನ್ನು ರಕ್ಷಿಸಲು ಮುಂದಾದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.
ಗುಂಡಮ್ಮ (35), ಸುಜಾತ (9) ಹಾಗೂ ಶಿವಲೀಲಾ (10) ಮೃತ ದುರ್ದೈವಿಗಳಾಗಿದ್ದಾರೆ.
ಭಾನುವಾರ ರಜೆ ಇದ್ದ ಕಾರಣ ಬಾಲಕಿಯರು ಬಟ್ಟೆ ತೊಳೆಯಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ. ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗುವುದನ್ನು ನೋಡಿದ ಗುಂಡಮ್ಮ ಎಂಬವರು ರಕ್ಷಿಸಲು ಹೋದಾಗ ಅವರು ಸಹ ಮುಳುಗಿ ಜೀವ ಕಳೆದುಕೊಂಡಿದ್ದಾರೆ.
ಕಾಲು ಜಾರಿ ಬಿದ್ದ ಇಬ್ಬರು
ಪ್ರಾಥಮಿಕ ಮಾಹಿತಿಯ ಪ್ರಕಾರ, ಮರಮ್ ಕ್ವಾರಿಯ ತೆಗ್ಗಿನಲ್ಲಿ ನೀರು ಆಳವಾಗಿದ್ದು, ಕಾಲು ಜಾರಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಗ್ರಾಮದಲ್ಲಿ ಸಮರ್ಪಕ ಕುಡಿಯುವ ಹಾಗೂ ಬಳಕೆಯ ನೀರಿನ ವ್ಯವಸ್ಥೆ ಇಲ್ಲದಿರುವುದು ಕೂಡ ಪರೋಕ್ಷವಾಗಿ ದುರಂತಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದೇ ಗ್ರಾಮದ ಮೂವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಬಸವನಗರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶಾಸಕರ ಭೇಟಿ
ಮೃತದೇಹಗಳ ಶವಪರೀಕ್ಷೆಗಾಗಿ ಇಲ್ಲಿನ ಮುದ್ನಾಳ ಸಮೀಪದ ಆಸ್ಪತ್ರೆಗೆ ಮೂರು ಜನರ ಮೃತದೇಹಗಳನ್ನು ತರಲಾಗಿದ್ದು, ಸುದ್ದಿ ತಿಳಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ.



