August 25, 2026
Tuesday, August 25, 2026
spot_img

ಧರ್ಮೇಂದ್ರ ಪ್ರಧಾನ್ ಬಳಿಕ ಜೋಶಿ ನೇಮಕಕ್ಕೂ ವಿರೋಧ: ಈ ಕಾಕ್ರೋಚ್ ಗಳಿಗೆ ಇನ್ನೇನು ಬೇಕು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿದರೂ, ಅವರ ಸ್ಥಾನಕ್ಕೆ ಪ್ರಲ್ಹಾದ್ ಜೋಶಿ ಅವರನ್ನು ನೇಮಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಕ್‌ರೋಚ್ ಜನತಾ ಪಾರ್ಟಿ (CJP) ವಿರೋಧಿಸಿದೆ. ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ, ಈ ನೇಮಕ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಿದ್ಯಾರ್ಥಿನಿಯರಿಗೆ ಯಾವ ಸಂದೇಶ ಹೋಗುತ್ತದೆ?’

ಸುದ್ದಿಗಾರರೊಂದಿಗೆ ಮಾತನಾಡಿದ ದಿಪ್ಕೆ, ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳ ಬಿಡುಗಡೆ ವಿಚಾರದಲ್ಲಿ ಪ್ರಲ್ಹಾದ್ ಜೋಶಿ ನೀಡಿದ್ದ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ, ಇಂತಹ ವ್ಯಕ್ತಿಯನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿನಿಯರಲ್ಲಿ ಸುರಕ್ಷತೆಯ ಭಾವನೆ ಮೂಡುತ್ತದೆಯೇ ಎಂದು ಪ್ರಶ್ನಿಸಿದರು. ಈ ಕಾರಣದಿಂದಲೇ ಜೋಶಿ ನೇಮಕವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.

ಪರಿಹಾರ ಘೋಷಣೆ ಇನ್ನೂ ಜಾರಿಯಾಗಿಲ್ಲ

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ಪರಿಹಾರ ನೀಡುವಂತೆ ಸಿಜೆಪಿ ಆಗ್ರಹಿಸಿತ್ತು. ಆದರೆ ಸರ್ಕಾರ ಇದುವರೆಗೆ ಯಾವುದೇ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ದಿಪ್ಕೆ ಆರೋಪಿಸಿದರು. ನಿಯಮಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂಬ ಸರ್ಕಾರದ ಸ್ಪಷ್ಟನೆ ತೃಪ್ತಿಕರವಾಗಿಲ್ಲ ಎಂದರು.

ಮತ್ತೆ ಪ್ರತಿಭಟನೆ ಎಚ್ಚರಿಕೆ

ಸಿಜೆಪಿ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು ಈಡೇರದಿದ್ದರೆ ಮತ್ತೊಮ್ಮೆ ಪ್ರತಿಭಟನೆ ನಡೆಸುವುದಾಗಿ ದಿಪ್ಕೆ ಎಚ್ಚರಿಕೆ ನೀಡಿದರು. ಪರಿಹಾರ ಘೋಷಣೆ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳ ಹಿಂಪಡೆಯುವಿಕೆ ಕುರಿತು ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೇಪಾಳ, ಬಾಂಗ್ಲಾದೇಶ ಹೋಲಿಕೆ ತಳ್ಳಿ ಹಾಕಿದ ಸಿಜೆಪಿ

ಸಿಜೆಪಿ ಪ್ರತಿಭಟನೆಯನ್ನು ನೇಪಾಳ ಹಾಗೂ ಬಾಂಗ್ಲಾದೇಶದ ವಿದ್ಯಾರ್ಥಿ ಚಳವಳಿಗಳೊಂದಿಗೆ ಹೋಲಿಕೆ ಮಾಡುತ್ತಿರುವುದು ಉದ್ದೇಶಪೂರ್ವಕ ಅಪಪ್ರಚಾರ ಎಂದು ದಿಪ್ಕೆ ಹೇಳಿದರು. ತಮ್ಮ ಸಂಘಟನೆಯ ಹೋರಾಟವು ಸಂಪೂರ್ಣವಾಗಿ ವಿಭಿನ್ನವಾಗಿದ್ದು, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಮಾತ್ರ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !