June 8, 2026
Monday, June 8, 2026
spot_img

ಮೋದಿ ಸರ್ಕಾರಕ್ಕೆ 12 ವರ್ಷ: ಎಕ್ಸ್‌ ಖಾತೆಯಲ್ಲಿ ಅಭಿವೃದ್ಧಿ, ಮಹತ್ವದ ಪರಿವರ್ತನೆ ಹಂಚಿಕೊಂಡ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಜನಕಲ್ಯಾಣ ಯೋಜನೆಗಳು ದೇಶದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಎಲ್ಲ ಪರಿವರ್ತನೆಗಳ ಕೇಂದ್ರಬಿಂದುವಾಗಿ ಬಡವರ ಕಲ್ಯಾಣವೇ ಕಾರ್ಯನಿರ್ವಹಿಸಿದೆ ಎಂದು ಅವರು ಸೋಮವಾರ ತಿಳಿಸಿದ್ದಾರೆ.

ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಸರ್ಕಾರದ ಕಾರ್ಯಚಟುವಟಿಕೆಗಳು ಅಂತ್ಯೋದಯ ತತ್ವದಿಂದ ಪ್ರೇರಿತವಾಗಿದ್ದು, ಅಭಿವೃದ್ಧಿಯಿಂದ ವಂಚಿತರಾದ ಜನರಿಗೆ ಅದರ ಪ್ರಯೋಜನಗಳನ್ನು ತಲುಪಿಸುವತ್ತ ನಿರಂತರವಾಗಿ ಪ್ರಯತ್ನಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಆಯುಷ್ಮಾನ್ ಭಾರತ್ ಹಾಗೂ ನೇರ ನಗದು ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ – ಡಿಬಿಟಿ) ಸೇರಿದಂತೆ ವಿವಿಧ ಯೋಜನೆಗಳನ್ನು ಉಲ್ಲೇಖಿಸಿರುವ ಅವರು, ಜನಸಾಮಾನ್ಯರಿಗೆ ಗೌರವಯುತ ಜೀವನ ಹಾಗೂ ಸಮಾನ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಬಡವರ ಕಲ್ಯಾಣದ 12 ವರ್ಷಗಳು’ (#12YearsOfGaribKalyan) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ತಂತ್ರಜ್ಞಾನವು ಬಡವರ ಜೀವನದ ಗುಣಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ನೇರ ನಗದು ವರ್ಗಾವಣೆ ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ಸರ್ಕಾರದ ನೆರವು ಯಾವುದೇ ಮಧ್ಯವರ್ತಿಗಳಿಲ್ಲದೆ ಪಾರದರ್ಶಕವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಇದರಿಂದ ಸೋರಿಕೆ ತಡೆಯಲು ಸಾಧ್ಯವಾಗಿದ್ದು, ಆಡಳಿತದ ದಕ್ಷತೆ ಹೆಚ್ಚುವುದರ ಜೊತೆಗೆ ಸರ್ಕಾರದ ಮೇಲಿನ ಸಾರ್ವಜನಿಕರ ವಿಶ್ವಾಸವೂ ಬಲಗೊಂಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಬಡವರ ಕಲ್ಯಾಣದ ಈ ಪಯಣವು ಮಾನವ ಸಬಲೀಕರಣ ಮತ್ತು ವಿಕಸಿತ ಭಾರತದ ನಿರ್ಮಾಣದತ್ತ ಸಾಗುತ್ತಿರುವ ಸಾಮೂಹಿಕ ಚಳವಳಿಯಾಗಿ ರೂಪುಗೊಂಡಿದೆ ಎಂದು ಪ್ರಧಾನಿ ಮೋದಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಅವುಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯೂ ಒಂದು. ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಗೆಯಿಂದ ಮುಕ್ತವಾದ ಅಡುಗೆ ವಾತಾವರಣವನ್ನು ಕಲ್ಪಿಸಿ, ಅವರ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ 2016ರ ಮೇ 1ರಂದು ಆರಂಭಿಸಲಾಗಿರುವ ಈ ಯೋಜನೆ ಅಡಿ ಇದಾಗಲೇ 10.5 ಕೋಟಿಗೂ ಹೆಚ್ಚು LPG ಸಂಪರ್ಕಗಳನ್ನು ಒದಗಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ, ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲ ಪೂರೈಸುವುದು ಈ ಯೋಜನೆಯ ಗುರಿಯಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರ ಆರೋಗ್ಯವನ್ನು ರಕ್ಷಿಸುವಲ್ಲಿ ಈ ಯೋಜನೆಯು ದೊಡ್ಡ ಕ್ರಾಂತಿಯನ್ನು ಮಾಡಿದೆ.

ಈ ಯೋಜನೆಯ ಅಡಿ ಪ್ರತಿ LPG ಸಂಪರ್ಕಕ್ಕೆ ಸರ್ಕಾರ 1 ಸಾವಿರದ 600 ರೂಪಾಯಿಗಳ ಆರ್ಥಿಕ ಬೆಂಬಲ ನೀಡುತ್ತದೆ. ಫಲಾನುಭವಿಗಳಿಗೆ ಠೇವಣಿ ರಹಿತ ಸಂಪರ್ಕ ದೊರೆಯುತ್ತದೆ. ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಪ್ರತಿ 14.2 ಕೆಜಿ ಸಿಲಿಂಡರ್‌ಗೆ 300 ರೂಪಾಯಿಗಳಂತೆ ಸಬ್ಸಿಡಿ ನೀಡುತ್ತಿದೆ. ವರ್ಷಕ್ಕೆ ಗರಿಷ್ಠ 9 ಸಿಲಿಂಡರ್‌ಗಳವರೆಗೆ ಈ ಸಬ್ಸಿಡಿ ಲಭ್ಯವಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !