ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಮಾನ್ ಕರಾವಳಿ ಸಮೀಪದ ಹೋರ್ಮುಜ್ ಜಲಸಂಧಿ ಬಳಿ ಸಂಚರಿಸುತ್ತಿದ್ದ ಹಡಗಿನ ಮೇಲೆ ದಾಳಿ ನಡೆದಿದ್ದು, ಅದರಲ್ಲಿದ್ದ 24 ಭಾರತೀಯ ನಾವಿಕರು ತುರ್ತು ನೆರವಿಗಾಗಿ ಎಸ್‌ಒಎಸ್ ಸಂದೇಶ ರವಾನಿಸಿದ ಘಟನೆ ವರದಿಯಾಗಿದೆ.
ಮಾಹಿತಿಗಳ ಪ್ರಕಾರ, ಪಲಾವ್ ಧ್ವಜದಡಿ ಕಾರ್ಯನಿರ್ವಹಿಸುತ್ತಿದ್ದ ಹಡಗಿನ ಎಂಜಿನ್ ಕೊಠಡಿಗೆ ಸ್ಫೋಟಕ ವಸ್ತು ಅಪ್ಪಳಿಸಿದ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಸ್ಫೋಟದಿಂದ ಹಡಗಿನ ಎಂಜಿನ್ ವಿಭಾಗಕ್ಕೆ ಹಾನಿಯಾಗಿದ್ದು, ನೀರು ನುಗ್ಗಿ ಹಡಗು ಮುಳುಗುವ ಅಪಾಯ ಎದುರಾಗಿದೆ ಎಂದು ತಿಳಿದುಬಂದಿದೆ.
ತುರ್ತು ಸಂದೇಶಗಳಲ್ಲಿ ‘ಹಡಗು ಮುಳುಗುತ್ತಿದೆ, ತಕ್ಷಣ ಸಹಾಯ ಬೇಕು’ ಎಂದು ಸಿಬ್ಬಂದಿ ಮನವಿ ಮಾಡಿದ್ದು, ಜೀವ ರಕ್ಷಕ ದೋಣಿಗಳನ್ನು ನೀರಿಗೆ ಇಳಿಸಲು ಸಾಧ್ಯವಾಗದಷ್ಟು ಬೆಂಕಿ ವ್ಯಾಪಿಸಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ಇದನ್ನೂ ಓದಿ:
ಘಟನೆ ಕುರಿತು ಮಾಹಿತಿ ಪಡೆದ ಒಮಾನ್ ಕರಾವಳಿ ರಕ್ಷಣಾ ಪಡೆ ಹಾಗೂ ಸಂಬಂಧಿತ ಸಮುದ್ರ ಸುರಕ್ಷತಾ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಲಭ್ಯವಿರುವ ವರದಿಗಳ ಪ್ರಕಾರ, ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅವರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಲಾಗಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ವಾಣಿಜ್ಯ ಹಡಗುಗಳು ಮತ್ತು ನಾಗರಿಕ ನಾವಿಕರ ಮೇಲೆ ನಡೆಯುವ ದಾಳಿಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಸಂಘರ್ಷದ ನಡುವೆಯೂ ಅಂತಾರಾಷ್ಟ್ರೀಯ ಸಮುದ್ರ ಮಾರ್ಗಗಳ ಸುರಕ್ಷತೆಯನ್ನು ಕಾಪಾಡುವುದು ಅಗತ್ಯ ಎಂದು ಸಚಿವಾಲಯ ಒತ್ತಿಹೇಳಿದೆ. ಇತ್ತೀಚಿನ ದಿನಗಳಲ್ಲಿ ಹೋರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಭಾರತೀಯ ನಾವಿಕರ ಸುರಕ್ಷತೆ ಕುರಿತ ಆತಂಕವೂ ಹೆಚ್ಚಾಗಿದೆ.



