ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರದೀಪ್ ರಂಗನಾಥನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ‘ಡ್ಯೂಡ್’ ಸಿನಿಮಾ, ದೀಪಾವಳಿ ಹಬ್ಬದ ಪ್ರಯುಕ್ತ 2025ರ ಅಕ್ಟೋಬರ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ನಟ ಮತ್ತು ನಿರ್ದೇಶಕ ಜೋಡಿ ಸೀಕ್ವೆಲ್‌ಗಾಗಿ ಮತ್ತೊಮ್ಮೆ ಒಂದಾಗುವ ಮುನ್ಸೂಚನೆಗಳು ಸಿಗುತ್ತಿವೆ.
‘ಡ್ಯೂಡ್ 2’ ಕಥೆ ಸಿದ್ಧಪಡಿಸಿದ ನಿರ್ದೇಶಕ
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ದೇಶಕ ಕೀರ್ತೀಶ್ವರನ್, “ನಾನು ‘ಡ್ಯೂಡ್ 2’ ಚಿತ್ರಕ್ಕಾಗಿ ಪ್ರದೀಪ್ ರಂಗನಾಥನ್‌ಗೆ ಒಂದು ಲೈನ್ ಕಥೆಯನ್ನು ಹೇಳಿದ್ದೇನೆ. ಇದು ಮೊದಲ ಭಾಗದ ಕಥೆವನ್ನು ಒಳಗೊಂಡಿರುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದು ‘ಡ್ಯೂಡ್’ ಚಿತ್ರದ ಸೀಕ್ವೆಲ್ ಅಥವಾ ಅದರ ಮುಂದುವರಿದ ಭಾಗವಾಗಲಿದೆ” ಎಂದು ತಿಳಿಸಿದ್ದಾರೆ.
‘ಡ್ಯೂಡ್’ ಸಿನಿಮಾದ ಕಥಾಹಂದರವೇನು?
‘ಡ್ಯೂಡ್’ ಸಿನಿಮಾವು ಅಗನ್ ಮತ್ತು ಕುರಲ್ ಎಂಬ ಇಬ್ಬರು ಸೋದರಸಂಬಂಧಿಗಳ ಸುತ್ತ ಸುತ್ತುತ್ತದೆ. ಇಬ್ಬರೂ ಸೇರಿ ಹೊಸದಾಗಿ ಇವೆಂಟ್ ಪ್ಲಾನಿಂಗ್ ಬಿಸಿನೆಸ್ ಪ್ರಾರಂಭಿಸುತ್ತಾರೆ. ಜತೆಯಾಗಿ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೀತಿಯಾಗಿ, ಒಬ್ಬರು ಮತ್ತೊಬ್ಬರಿಗೆ ಮದುವೆಯ ಪ್ರಸ್ತಾಪ ಇಡುತ್ತಾರೆ. ಇದರಿಂದ ಅವರ ಸಂಬಂಧದಲ್ಲಿ ಗೊಂದಲಗಳು ಶುರುವಾಗುತ್ತವೆ. ಎಲ್ಲವೂ ಸುಖಾಂತ್ಯದ ಕಡೆಗೆ ಸಾಗುತ್ತಿದೆ ಎನ್ನುವಷ್ಟರಲ್ಲಿ, ಅನಿರೀಕ್ಷಿತ ಗರ್ಭಧಾರಣೆಯು ಕಥೆಯಲ್ಲಿ ದೊಡ್ಡ ಗದ್ದಲ ಮತ್ತು ಮಹತ್ವದ ತಿರುವುಗಳನ್ನು ಉಂಟುಮಾಡುತ್ತದೆ.
ಮಮಿತಾ ಬೈಜು ನಾಯಕಿಯಾಗಿ ನಟಿಸಿದ್ದ ಈ ಚಿತ್ರದಲ್ಲಿ ಆರ್. ಶರತ್‌ಕುಮಾರ್, ಹೃದು ಹಾರೂನ್, ರೋಹಿಣಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು.
ಸಿಲಂಬರಸನ್ TR ಜತೆ ಹೊಸ ಪ್ರಾಜೆಕ್ಟ್
ಇದೇ ಕಾರ್ಯಕ್ರಮದಲ್ಲಿ ನಿರ್ದೇಶಕರು ನಟ ಸಿಲಂಬರಸನ್ ಟಿಆರ್‌ರೊಂದಿಗಿನ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ಸುಳಿವು ನೀಡಿದ್ದಾರೆ. “ನಾನು ಪ್ರಸ್ತುತ ಒಂದು ಕಥೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್, ಎಮೋಷನ್ಸ್ ಮತ್ತು ಇನ್ನೂ ಹೆಚ್ಚಿನ ವಿಷಯಗಳಿವೆ. ಈ ಸ್ಕ್ರಿಪ್ಟ್‌ಗೆ ಒಬ್ಬ ದೊಡ್ಡ ಸ್ಟಾರ್ ನಟನ ಅಗತ್ಯವಿದೆ ಮತ್ತು ನನ್ನ ಮನಸ್ಸಿನಲ್ಲಿ ಅಂತಹ ಒಬ್ಬ ಸ್ಟಾರ್ ಇದ್ದಾರೆ. ನಾವು ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಿದ್ದೇವೆ” ಎಂದಿದ್ದಾರೆ.
ಸಿನಿಮಾ ವಲಯದ ಮಾಹಿತಿ ಪ್ರಕಾರ, ನಿರ್ದೇಶಕ ಅಶ್ವತ್ ಮಾರೀಮುತ್ತು, ರಜನಿಕಾಂತ್ ‘ತಲೈವರ್ 173’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದರಿಂದ ‘STR 51’ ಚಿತ್ರದ ಚಿತ್ರೀಕರಣ 2027 ರವರೆಗೆ ವಿಳಂಬವಾಗುವ ಸಾಧ್ಯತೆಯಿದೆ. ಪರಿಣಾಮವಾಗಿ, ಸಿಲಂಬರಸನ್ ಟಿಆರ್ ವೆಟ್ರಿಮಾರನ್ ನಿರ್ದೇಶನದ ‘ಅರಸನ್’ ಚಿತ್ರ ಮುಗಿಸಿದ ನಂತರ ನಿರ್ದೇಶಕ ಕೀರ್ತೀಶ್ವರನ್‌ರೊಂದಿಗೆ ಹೊಸ ಸಿನಿಮಾ ಮಾಡಲಿದ್ದಾರೆ ಎಂದು ವದಂತಿಗಳು ಹರಿದಾಡುತ್ತಿವೆ. ಆದರೆ, ಚಿತ್ರತಂಡದಿಂದ ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ.



