ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದ್ದು, ಐ ವಿಟ್ನೆಸ್ ಪುನೀತ್ಗೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಪ್ರಶ್ನೆಗಳನ್ನು ಕೇಳಲಿದ್ದಾರೆ.
ಈ ಹಿಂದೆ ತನಿಖೆಯ ಸಂದರ್ಭದಲ್ಲಿ ಪುನೀತ್ ನ್ಯಾಯಾಧೀಶರ ಮುಂದೆ ಸಿಆರ್ಪಿಸಿ 164ರ ಅಡಿಯಲ್ಲಿ ಹೇಳಿಕೆ ನೀಡಿದ್ದರು. ಆದರೆ ಕೆಲ ದಿನಗಳ ಹಿಂದೆ ನಡೆದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಕೇಳಿದ ಪ್ರಶ್ನೆಗಳಿಗೆ ಪುನೀತ್, ನನಗೆ ಗೊತ್ತಿಲ್ಲ, ನಾನು ನೋಡಿಲ್ಲ, ನೆನಪು ಬರುತ್ತಿಲ್ಲ ಎಂದು ಉತ್ತರಿಸಿದ್ದಾರೆ. ಹೀಗಾಗಿ ಈತನನ್ನು ಹಾಸ್ಟೈಲ್ ವಿಟ್ನೆಸ್ ಎಂದು ಪರಿಗಣಿಸುವಂತೆ ಮನವಿ ಮಾಡಲಾಗಿತ್ತು.
ಇಂದು ಆತ ಹೇಳಿದ ಹಳೆಯ ಹೇಳಿಕೆಯ ದಾಖಲೆಯನ್ನು ತರಿಸಿಕೊಂಡು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಪುನೀತ್ನನ್ನು ಪ್ರಶ್ನಿಸಲಿದ್ದಾರೆ. ಹಿಂದೆ ನೀಡಿರುವ ಹೇಳಿಕೆಗಳಿಗೂ ಈಗ ನೀಡುತ್ತಿರುವ ಹೇಳಿಕೆಗಳಿಗೂ ವ್ಯತ್ಯಾಸ ಆಗಿದ್ದು ಎಲ್ಲಿ? ಯಾಕೆ ಎನ್ನುವ ಬಗ್ಗೆ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದೆ. ಇನ್ನು ತಿಕೂಲ ಸಾಕ್ಷಿಯಾಗಿ ಹೇಳಿಕೆ ನೀಡಿರುವುದರ ಬಗ್ಗೆಯೂ ಪಾಟಿಸವಾಲು ನಡೆಸಲಿದ್ದಾರೆ.
ಇತ್ತ ನಟ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಸೌಲಭ್ಯ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ. ದರ್ಶನ್ಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಈ ಹಿಂದೆ ನ್ಯಾಯಾಲಯ ಸೂಚಿಸಿತ್ತು. ದರ್ಶನ್ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿ ಕಾಲಾವಕಾಶ ಕೋರಿದ್ದರು. ಬೆನ್ನುನೋವಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಆಕ್ಷೇಪಣೆ ಸಿದ್ಧಪಡಿಸುತ್ತಿದೆ.



