ಹೊಸದಿಗಂತ ವರದಿ ಬೀದರ್:
ವಿಶ್ವದ ಗಮನ ಸೆಳೆದ ದೂರದೃಷ್ಟಿಯ ನಾಯಕತ್ವದ ಪ್ರತೀಕವಾದ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ 12 ವರ್ಷಗಳ ಯಶಸ್ವಿ ಆಡಳಿತವನ್ನು ಪೂರೈಸಿರುವುದು ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಎಖೇಳ್ಳಿ ಗ್ರಾಮದ ಸುಪ್ರಸಿದ್ಧ ಶ್ರೀ ಶಿವನ ದೇವಾಲಯದಲ್ಲಿ ಬಿಜೆಪಿ ಬೀದರ್ ದಕ್ಷಿಣ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 12 ವರ್ಷಗಳಲ್ಲಿ ಮೂಲಸೌಕರ್ಯ, ಆರ್ಥಿಕತೆ, ಡಿಜಿಟಲ್ ಕ್ರಾಂತಿ, ರಾಷ್ಟ್ರೀಯ ಭದ್ರತೆ, ಮಹಿಳಾ ಸಬಲೀಕರಣ, ರೈತರ ಕಲ್ಯಾಣ, ಬಡವರ ಅಭಿವೃದ್ಧಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. “ವಿಕಸಿತ ಭಾರತ”ದ ಕನಸನ್ನು ನನಸಾಗಿಸುವ ದಿಕ್ಕಿನಲ್ಲಿ ದೇಶವನ್ನು ದೃಢವಾಗಿ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಐತಿಹಾಸಿಕ ಸಾಧನೆಯ ಸ್ಮರಣಾರ್ಥ ಹಾಗೂ ದೇಶದ ಸುಭಿಕ್ಷತೆ ಮತ್ತು ಲೋಕಕಲ್ಯಾಣಕ್ಕಾಗಿ ಮನ್ನಾಎಖೇಳ್ಳಿ ಗ್ರಾಮದ ಪವಿತ್ರ ಶಿವನ ಮಂದಿರದಲ್ಲಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಪರಿಸರ ಸಂರಕ್ಷಣೆ ಮತ್ತು ಸೇವಾ ಮನೋಭಾವವನ್ನು ಸಾರಲಾಯಿತು.
ಇದನ್ನೂ ಓದಿ:
ದೇಶದ ಏಕತೆ, ಸಮೃದ್ಧಿ ಹಾಗೂ ಜನಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಭಗವಂತ ಶಿವನು ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ, ಅಚಲ ಮನೋಬಲ ಹಾಗೂ ಇನ್ನಷ್ಟು ಶಕ್ತಿ-ಸಾಮರ್ಥ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
“ಸೇವೆಯೇ ಸಂಕಲ್ಪ – ರಾಷ್ಟ್ರವೇ ಪ್ರಥಮ” ಎಂಬ ಧ್ಯೇಯದೊಂದಿಗೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಇನ್ನಷ್ಟು ವೈಭವದ ಶಿಖರ ತಲುಪಲಿ ಎಂಬುದು ಎಲ್ಲರ ಆಶಯವಾಗಿದೆ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯ, ಜಿಲ್ಲಾ, ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.



