ರಾತ್ರಿಯ ಊಟಕ್ಕೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ರಾಗಿ ಸೂಪ್ ಅತ್ಯುತ್ತಮವಾದ ಆಯ್ಕೆಯಾಗಿದೆ. ಇದು ಹೊಟ್ಟೆಯನ್ನು ತುಂಬಿಡುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು
ಸಣ್ಣಗೆ ಹೆಚ್ಚಿದ ತರಕಾರಿಗಳು(ಕ್ಯಾರೆಟ್, ಬೀನ್ಸ್, ಎಲೆಕೋಸು, ಸ್ವೀಟ್ ಕಾರ್ನ್)
ಈರುಳ್ಳಿ
ಬೆಳ್ಳುಳ್ಳಿ
ಶುಂಠಿ
ಬೆಣ್ಣೆ ಅಥವಾ ಎಣ್ಣೆ
ಕಾಳುಮೆಣಸಿನ ಪುಡಿ
ಜೀರಿಗೆ ಪುಡಿ
ನೀರು
ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಒಂದು ಬೌಲ್‌ನಲ್ಲಿ 2 ಚಮಚ ರಾಗಿ ಹಿಟ್ಟು ಮತ್ತು ಅರ್ಧ ಕಪ್ ನೀರು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿ ಪಕ್ಕಕ್ಕೆ ಇಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆಗೆ 1 ಚಮಚ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ನಂತರ ಕ್ಯಾರೆಟ್, ಬೀನ್ಸ್, ಎಲೆಕೋಸು ಹಾಕಿ 2 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿದುಕೊಂಡು. ಆಮೇಲೆ 2 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ತರಕಾರಿಗಳನ್ನು 3-4 ನಿಮಿಷ ಚೆನ್ನಾಗಿ ಕುದಿಸಿ. ತರಕಾರಿ ಬೆಂದ ನಂತರ, ಉರಿಯನ್ನು ಪೂರ್ತಿ ಕಡಿಮೆ ಮಾಡಿ, ಮೊದಲೇ ಕಲಸಿಟ್ಟುಕೊಂಡ ರಾಗಿ ಹಿಟ್ಟಿನ ಮಿಶ್ರಣವನ್ನು ನಿಧಾನವಾಗಿ ಸುರಿಯುತ್ತಾ ಕೈಯಾಡಿಸಬೇಕು. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ 4-5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಸೂಪ್ ಗಟ್ಟಿಯಾಗುತ್ತಾ ಬರುತ್ತದೆ. ಸೂಪ್ ಚೆನ್ನಾಗಿ ಬೆಂದ ನಂತರ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಆರೋಗ್ಯಕರ ರಾಗಿ ಸೂಪ್ ಸವಿಯಲು ಸಿದ್ಧವಾಗುತ್ತದೆ.



