ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಖ್ಯಾತ ಶೂಟಿಂಗ್ ಕೋಚ್ ಹಾಗೂ ಮಾಜಿ ಶೂಟರ್ ಜಸ್ಪಾಲ್ ರಾಣಾ ತಮ್ಮ 49ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದಾಗಿ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದೆ ಜರ್ಮನಿಯ ಮ್ಯೂನಿಕ್ನಲ್ಲಿ ಐಎಸ್ಎಸ್ಎಫ್ ವಿಶ್ವಕಪ್ ನಡೆಯುತ್ತಿತ್ತು. ಈ ವೇಳೆ ಜಸ್ಪಾಲ್ ರಾಣಾ ಅವರಿಗೆ ಎದೆನೋವು ಕಾಣಿಸಿತ್ತು. ಅದು ಗ್ಯಾಸ್ಟ್ರಿಕ್ ಎಂದುಕೊಂಡು ಪ್ರವಾಸ ಮುಂದುವರಿಸಿದ್ದಾರೆ.
ತದನಂತರ ವಿಮಾನದಲ್ಲಿ ವಾಪಾಸಾಗುವ ವೇಳೆ ಮತ್ತೊಮ್ಮೆ ಎದೆನೋವು ಕಾಣಿಸಿದೆ. ದೆಹಲಿ ತಲುಪಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ರಕ್ತನಾಳದಲ್ಲಿ ಬ್ಲಾಕೇಜ್ ಇರುವುದು ಪತ್ತೆಯಾಗಿದೆ. ಬಳಿಕ ಸ್ಟೆಂಟ್ ಅಳವಡಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇನ್ನೊಂದು ಸ್ಟೆಂಟ್ ಅಳವಡಿಸುವ ಪ್ರಕ್ರಿಯೆಯೂ ನಡೆಯಬೇಕಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜಸ್ಪಾಲ್ ರಾಣಾ ನಿಧನರಾಗಿದ್ದಾರೆ.

ಭಾರತೀಯ ಶೂಟಿಂಗ್ ಕ್ಷೇತ್ರದ ದಿಗ್ಗಜರಾಗಿದ್ದ ಜಸ್ಪಾಲ್ ರಾಣಾ, ಒಲಿಂಪಿಯನ್ ಮನು ಭಾಕರ್ ಅವರ ಯಶಸ್ಸಿನ ಹಿಂದಿನ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.
ಜಸ್ಪಾಲ್ ರಾಣಾ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲೂ ಭಾರತದ ಪರ ಅತ್ಯಂತ ಯಶಸ್ವಿ ಶೂಟರ್ಗಳಲ್ಲಿ ಒಬ್ಬರಾಗಿದ್ದರು. 1994, 1998, 2002 ಮತ್ತು 2006ರ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದು ಮಿಂಚಿದ್ದರು. ಕೇವಲ 18ನೇ ವಯಸ್ಸಿನಲ್ಲಿ 1994ರ ಮಿಲಾನ್ ವಿಶ್ವ ಚಾಂಪಿಯನ್ಶಿಪ್ನ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು, ವಿಶ್ವ ದಾಖಲೆಯೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು.



