ಹಬ್ಬ ಹರಿದಿನಗಳು, ಮದುವೆ ಅಥವಾ ಯಾವುದೇ ವಿಶೇಷ ಸಮಾರಂಭಗಳಿಗೆ ಹೋಗುವ ಮುನ್ನ ಮುಖದ ಮೇಲೆ ತಕ್ಷಣದ ಹೊಳಪು ಬರಬೇಕೆಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ಬ್ಯೂಟಿ ಪಾರ್ಲರ್‌ಗೆ ಓಡಿಹೋಗಿ ದುಬಾರಿ ಬ್ಲೀಚ್ ಅಥವಾ ಕೆಮಿಕಲ್ ಫೇಷಿಯಲ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಅಡುಗೆಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕೇವಲ 4 ಸರಳ ಹಂತಗಳಲ್ಲಿ ಮನೆಯಲ್ಲೇ ಇನ್‌ಸ್ಟಂಟ್ ಫೇಷಿಯಲ್ ಮಾಡಿಕೊಳ್ಳಬಹುದು. ಇದು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಮುಖಕ್ಕೆ ಗ್ಲೋ ನೀಡುತ್ತದೆ.
ಇನ್‌ಸ್ಟಂಟ್ ಫೇಷಿಯಲ್ ಮಾಡುವ 4 ಪ್ರಮುಖ ಹಂತಗಳು
ಆಳವಾದ ಸ್ವಚ್ಛತೆ
ಫೇಷಿಯಲ್ ಮಾಡುವ ಮುನ್ನ ಮುಖದ ಮೇಲಿನ ಧೂಳು ಮತ್ತು ಜಿಡ್ಡನ್ನು ತೆಗೆಯುವುದು ಮೊದಲ ಹಂತವಾಗಿದೆ. ಅದಕ್ಕಾಗಿ 2 ಚಮಚ ಹಸಿ ಹಾಲಿನಲ್ಲಿ ಹತ್ತಿ ಉಂಡೆಯನ್ನು ನೆನೆಸಿ ಮುಖ ಮತ್ತು ಕುತ್ತಿಗೆಯನ್ನು ಚೆನ್ನಾಗಿ ಒರೆಸಿಕೊಳ್ಳಬೇಕು. ಹಾಲು ನೈಸರ್ಗಿಕ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. 2 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.
ಸತ್ತ ಚರ್ಮದ ನಿವಾರಣೆ
ಚರ್ಮದ ಮೇಲಿರುವ ಡೆಡ್ ಸ್ಕಿನ್‌ನ್ನು ತೆಗೆದಾಗ ಮಾತ್ರ ಮುಖ ಹೊಳೆಯಲು ಸಾಧ್ಯ.
ಆದ್ದರಿಂದ ಅರ್ಧ ಕಟ್ ಮಾಡಿದ ಟೊಮೆಟೊ ತುಂಡಿನ ಮೇಲೆ 1 ಚಮಚ ಸಕ್ಕರೆ ಹಾಕಿ. ಅದನ್ನು ಮುಖದ ಮೇಲೆ ವೃತ್ತಾಕಾರದಲ್ಲಿ 3-5 ನಿಮಿಷಗಳ ಕಾಲ ಹಗುರವಾಗಿ ಸ್ಕ್ರಬ್ ಮಾಡಬೇಕು. ಟೊಮೆಟೊದಲ್ಲಿರುವ ವಿಟಮಿನ್ ಸಿ ಟ್ಯಾನ್ ನಿವಾರಿಸಿದರೆ, ಸಕ್ಕರೆಯು ಬ್ಲ್ಯಾಕ್‌ಹೆಡ್ಸ್ ಅನ್ನು ತೆಗೆಯುತ್ತದೆ.
ಪೋಷಕಾಂಶದ ಮಸಾಜ್
ಮಸಾಜ್ ಮಾಡುವುದರಿಂದ ಮುಖದಲ್ಲಿ ರಕ್ತಸಂಚಲನ ಹೆಚ್ಚಾಗಿ ನೈಸರ್ಗಿಕ ಕಳೆ ಬರುತ್ತದೆ.ಹಾಗಾಗಿ, 1 ಚಮಚ ಅಲೋವೆರಾ ಜೆಲ್‌ಗೆ 1 ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಈ ಜೆಲ್‌ನಿಂದ ಮುಖ ಮತ್ತು ಕುತ್ತಿಗೆಗೆ ಕೆಳಗಿನಿಂದ ಮೇಲ್ಮುಖವಾಗಿ 5 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ನಂತರ ಒದ್ದೆ ಬಟ್ಟೆಯಿಂದ ಮುಖ ಒರೆಸಬೇಕು.
ಗ್ಲೋಯಿಂಗ್ ಫೇಸ್ ಪ್ಯಾಕ್
ಇದು ಫೇಷಿಯಲ್‌ನ ಅಂತಿಮ ಮತ್ತು ಅತ್ಯಂತ ಪ್ರಮುಖ ಹಂತವಾಗಿದ್ದು, ಒಂದು ಬೌಲ್‌ನಲ್ಲಿ 2 ಚಮಚ ಕಡಲೆಹಿಟ್ಟು, 1 ಚಮಚ ಗಟ್ಟಿ ಮೊಸರು ಮತ್ತು ಒಂದು ಚಿಟಿಕೆ ಅರಿಶಿನ ಪುಡಿ ಸೇರಿಸಿ ಗಟ್ಟಿಯಾದ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಬೇಕು. ಪ್ಯಾಕ್ ಸಂಪೂರ್ಣವಾಗಿ ಒಣಗಿದ ನಂತರ ಮುಖವನ್ನು ತಣ್ಣೀರಿನಿಂದ ಮಸಾಜ್ ಮಾಡುತ್ತಾ ತೊಳೆಯಬೇಕು.



