June 13, 2026
Saturday, June 13, 2026
spot_img

IND vs AFG | ಶುಭ್‌ಮನ್‌ ಹಾಫ್‌ಸೆಂಚುರಿ, ರಾಹುಲ್‌ ಕ್ರೇಝಿ ಬ್ಯಾಟಿಂಗ್‌! ಸುಲಭವಾಗಿ ಗೆದ್ದ ಟೀಂ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿದೆ.

ಮಳೆಯ ನಡುವೆ ರೋಚಕ ರನ್ ಬೇಟೆ:
ಮಳೆಯ ಕಾರಣದಿಂದಾಗಿ ಪಂದ್ಯವನ್ನು ತಲಾ 25 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ರಹಮಾನುಲ್ಲಾ ಗುರ್ಬಾಜ್ ಶತಕದ ನೆರವಿನಿಂದ 24.5 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಆಗಿತ್ತು. 195 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 22.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ ವಿಜಯದ ಪತಾಕೆ ಹಾರಿಸಿತು.

ನಾಯಕನ ಆಟವಾಡಿದ ಶುಭ್ಮನ್ ಗಿಲ್:
ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ಶುಭ್ಮನ್ ಗಿಲ್ ಭರ್ಜರಿ ಆರಂಭ ನೀಡಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಕೇವಲ 66 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 84 ರನ್ ಚಚ್ಚಿ ತಂಡದ ಗೆಲುವನ್ನು ಖಚಿತಪಡಿಸಿದರು. ಆರಂಭಿಕ ಆಟಗಾರ ಇಶಾನ್ ಕಿಶನ್ 34 ರನ್ ಹಾಗೂ ರೋಹಿತ್ ಶರ್ಮಾ 16 ರನ್ ಕೊಡುಗೆ ನೀಡಿದರು.

ಫಿನಿಶರ್ ರೂಪದಲ್ಲಿ ಕೆ.ಎಲ್ ರಾಹುಲ್ ಅಬ್ಬರ:
ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್. ರಾಹುಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಬೇಗನೇ ಮುಗಿಸಿದರು. ಕೇವಲ 19 ಎಸೆತಗಳನ್ನು ಎದುರಿಸಿದ ರಾಹುಲ್ 4 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 39 ರನ್ ಗಳಿಸಿ ಔಟಾಗದೆ ಉಳಿದರು. ಜಿಯಾವುರ್ ರೆಹಮಾನ್ ಎಸೆದ ಓವರ್ ಒಂದರಲ್ಲೇ 20 ರನ್ ಚಚ್ಚಿದ ರಾಹುಲ್, ಭಾರತದ ಗೆಲುವನ್ನು ಅತ್ಯಂತ ಸುಲಭಗೊಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !