ರಾಗಿ ದೋಸೆ ಕರ್ನಾಟಕದ ಅತ್ಯಂತ ಜನಪ್ರಿಯ, ಸಾಂಪ್ರದಾಯಿಕ ಮತ್ತು ಪೌಷ್ಟಿಕಾಂಶಯುಕ್ತ ಬೆಳಗಿನ ಉಪಹಾರಗಳಲ್ಲೊಂದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಮಧುಮೇಹಿಗಳಿಗೆ ಮತ್ತು ದೈನಂದಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಇಚ್ಛಿಸುವವರಿಗೆ ಇದು ಅತ್ಯುತ್ತಮ ಆಹಾರ.
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು
ಅಕ್ಕಿ ಹಿಟ್ಟು ಅಥವಾ ಚಿರೋಟಿ ರವೆ
ಗಟ್ಟಿ ಮೊಸರು ಅಥವಾ ಮಜ್ಜಿಗೆ
ನೀರು
ಈರುಳ್ಳಿ
ಹಸಿಮೆಣಸಿನಕಾಯಿ
ಜೀರಿಗೆ
ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು
ಉಪ್ಪು
ಎಣ್ಣೆ ಅಥವಾ ತುಪ್ಪ
ಮಾಡುವ ವಿಧಾನ
ಮೊದಲು ಒಂದು ದೊಡ್ಡ ಬೌಲ್ನಲ್ಲಿ ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಮಜ್ಜಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಬೇಕು.
ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರವೆ ದೋಸೆ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ಗಟ್ಟಿಯಾಗಿದ್ದರೆ ದೋಸೆ ಮೃದುವಾಗಿ ಬರುವುದಿಲ್ಲ ಮತ್ತು ತೂತುಗಳು ಬೀಳುವುದಿಲ್ಲ. ಈಗ ಕಲಸಿದ ಹಿಟ್ಟಿಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಹಿಟ್ಟನ್ನು 10 ನಿಮಿಷ ಪಕ್ಕಕ್ಕೆ ಇಡಬೇಕು. ನಂತರ ದೋಸೆ ಹಂಚನ್ನು ಚೆನ್ನಾಗಿ ಕಾಯಿಸಿ. ಹಂಚು ಕಾದ ನಂತರ, ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಕೈಯಾಡಿಸಿ. ಸಾಮಾನ್ಯ ದೋಸೆಯಂತೆ ಮಧ್ಯದಲ್ಲಿ ಹಿಟ್ಟು ಹಾಕಿ ತಿರುಗಿಸಬೇಡಿ. ಬದಲಿಗೆ, ಕಾದ ತವಾದ ಮೇಲೆ ಹೊರಗಿನಿಂದ ಒಳಗಡೆಗೆ ಹಿಟ್ಟನ್ನು ತೆಳುವಾಗಿ ಸುರಿಯಬೇಕು.
ನಂತರ ದೋಸೆಯ ಸುತ್ತಲೂ ಮತ್ತು ಮಧ್ಯದಲ್ಲಿ ಕೆಲವು ಹನಿ ಎಣ್ಣೆ ಅಥವಾ ತುಪ್ಪ ಹಾಕಿ. ಉರಿಯನ್ನು ಮಧ್ಯಮ ಹದದಲ್ಲಿಟ್ಟು ದೋಸೆ ಗರಿಗರಿಯಾಗುವವರೆಗೆ ಬೇಯಿಸಿ. ಒಂದು ಬದಿ ಚೆನ್ನಾಗಿ ಬೆಂದ ನಂತರ ದೋಸೆಯನ್ನು ಮಗುಚಿ ಹಾಕಿ, ಇನ್ನೊಂದು ಬದಿಯೂ 1 ನಿಮಿಷ ಬೇಯಲು ಬಿಡಬೇಕು. ಆಗ ಬಿಸಿ ಬಿಸಿ ಮತ್ತು ಗರಿಗರಿಯಾದ ರಾಗಿ ದೋಸೆ ಸಿದ್ಧವಾಗುತ್ತದೆ.



