ಹೊಸದಿಗಂತ ಡಿಜಿಟಲ್ ಡೆಸ್ಕ್:
ಢಾಕಾದ ಶೇರೆ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ ವಿರುದ್ಧ 1 ವಿಕೆಟ್‌ನ ರೋಚಕ ಜಯ ಸಾಧಿಸಿದೆ. ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಆಸೀಸ್, ಕೊನೆಯ ಪಂದ್ಯದಲ್ಲಿ ಕೇವಲ 3 ಎಸೆತಗಳು ಬಾಕಿ ಇರುವಾಗ ಗೆಲುವಿನ ನಗೆ ಬೀರಿದೆ.
ಬಾಂಗ್ಲಾ ಬ್ಯಾಟಿಂಗ್; ಆಸೀಸ್‌ಗೆ ಸವಾಲಿನ ಗುರಿ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಜ್ಮುಲ್ ಹೊಸೈನ್ ಶಾಂತೊ ನೇತೃತ್ವದ ಬಾಂಗ್ಲಾದೇಶ, ನಿಗದಿತ 50 ಓವರ್‌ಗಳಲ್ಲಿ 274 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
ಕೂಪರ್ ಕೊನೊಲಿ ಭರ್ಜರಿ ಶತಕದ ಆಟ
275 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ ಕೂಪರ್ ಕೊನೊಲಿ (149 ರನ್) ಸ್ಪೋಟಕ ಶತಕ ಸಿಡಿಸಿ ಜಯ ಸರಳಗೊಳಿಸಿದರು. ಪರಿಣಾಮ ಆಸೀಸ್‌ಗೆ ಕೊನೆಯ 12 ಎಸೆತಗಳಲ್ಲಿ ಕೇವಲ 5 ರನ್ ಬೇಕಿತ್ತು. ಈ ವೇಳೆ ಮುಸ್ತಫಿಝುರ್ ರೆಹಮಾನ್ 49ನೇ ಓವರ್‌ನಲ್ಲಿ ಕೇವಲ 2 ರನ್ ನೀಡಿ 9ನೇ ವಿಕೆಟ್ ಉರುಳಿಸಿದರು.
ಆ್ಯಡಂ ಝಂಪಾ ಬೌಂಡರಿ ಫಿನಿಶಿಂಗ್!
ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 3 ರನ್ ಬೇಕಿದ್ದರೆ, ಬಾಂಗ್ಲಾಕ್ಕೆ 1 ವಿಕೆಟ್ ಅಗತ್ಯವಿತ್ತು. ತಸ್ಕಿನ್ ಅಹ್ಮದ್ ಎಸೆದ 50ನೇ ಓವರ್‌ನ ಮೂರನೇ ಎಸೆತದಲ್ಲಿ ಆ್ಯಡಂ ಝಂಪಾ ಭರ್ಜರಿ ಫೋರ್ ಬಾರಿಸುವ ಮೂಲಕ 49.3 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಬಾಂಗ್ಲಾಗೆ ಐತಿಹಾಸಿಕ ಸರಣಿ ಗೌರವ
ಈ ಪಂದ್ಯದಲ್ಲಿ ಸೋತರೂ ಸಹ, ಬಾಂಗ್ಲಾದೇಶ ತಂಡವು ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ 2-1 ಅಂತರದಿಂದ ಐತಿಹಾಸಿಕ ಏಕದಿನ ಸರಣಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ.



