June 20, 2026
Saturday, June 20, 2026
spot_img

ಅಮೆರಿಕ ವಾಯುಪಡೆಗೆ ಬಿಗ್ ಶಾಕ್: ಯುದ್ಧ ವಿಮಾನ B-52 ಬಾಂಬರ್ ಪತನ, 8 ಮಂದಿ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ವಾಯುಪಡೆಯ ಅತ್ಯಂತ ಶಕ್ತಿಶಾಲಿ ಬಿ-52 ಬಾಂಬರ್ (B-52 Bomber) ಯುದ್ಧ ವಿಮಾನವು ಕ್ಯಾಲಿಫೋರ್ನಿಯಾದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 8 ಮಂದಿ ಸಾವನ್ನಪ್ಪಿದ್ದಾರೆ. ಲಾಸ್‌ ಏಂಜಲೀಸ್‌ನಿಂದ ಉತ್ತರಕ್ಕೆ ಸುಮಾರು 95 ಕಿಲೋಮೀಟರ್ ದೂರದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಎಡ್ವರ್ಡ್ಸ್ ವಾಯುನೆಲೆಯಲ್ಲಿ ದುರಂತ

ದಕ್ಷಿಣ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುನೆಲೆಯಿಂದ ಸೋಮವಾರ ಬೆಳಗ್ಗೆ 11:20 ರ ಸುಮಾರಿಗೆ ಬಿ-52 ‘ಸ್ಟ್ರಾಟೊಫೋರ್ಟ್ರೆಸ್’ ವಿಮಾನವು ಪರೀಕ್ಷಾರ್ಥ ಹಾರಾಟಕ್ಕಾಗಿ ಟೇಕ್-ಆಫ್ ಆಗಿತ್ತು. ಆದರೆ, ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವು ರನ್‌ವೇಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ವಿಮಾನವು ಸಂಪೂರ್ಣವಾಗಿ ನಾಶವಾಗಿದ್ದು, ದಟ್ಟ ಹೊಗೆ ಮತ್ತು ಬೆಂಕಿ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಎಂಟು ಮಂದಿ ಸೈನಿಕರ ಸಾವು

ಈ ವಿಮಾನವು ರಾಡಾರ್ ಆಧುನೀಕರಣ ಕಾರ್ಯಕ್ರಮದ ಭಾಗವಾಗಿ ಕಾರ್ಯನಿರ್ವಹಿಸುತ್ತಿತ್ತು. ದುರಂತದ ವೇಳೆ ವಿಮಾನದಲ್ಲಿದ್ದ ಸರ್ಕಾರಿ ಅಧಿಕಾರಿಗಳು ಮತ್ತು ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 8 ಮಂದಿ ಜೀವಂತವಾಗಿ ದಹನವಾಗಿದ್ದಾರೆ ಎಂದು ವಾಯುಪಡೆಯ ಕರ್ನಲ್ ಜೇಮ್ಸ್ ಹೇಯ್ಸ್ ಖಚಿತಪಡಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಚುರುಕು

ಘಟನೆಯ ನಂತರ ಎಡ್ವರ್ಡ್ಸ್ ವಾಯುನೆಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಈ ಮಾರ್ಗದ ಎಲ್ಲಾ ವಿಮಾನಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ. 8 ಎಂಜಿನ್‌ಗಳನ್ನು ಹೊಂದಿರುವ, ಪರಮಾಣು ಬಾಂಬ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ಈ ಬೃಹತ್ ವಿಮಾನದ ಅಪಘಾತಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ವಾಯುಪಡೆ ತನಿಖೆ ಆರಂಭಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !