June 20, 2026
Saturday, June 20, 2026
spot_img

ಇನ್ಮುಂದೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್ ಶಾಪ್‌ನಲ್ಲಿ ಸಿರಪ್ ಸಿಗಲ್ಲ! ಕೇಂದ್ರ ಸರ್ಕಾರ ಹೊಸ ರೂಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜ್ವರ ಬಂದರೆ ಮೆಡಿಕಲ್ ಅಂಗಡಿಗೆ ಹೋಗಿ ಸಿರಪ್ ತೆಗೆದುಕೊಳ್ಳುವುದು, ಮಕ್ಕಳಿಗೆ ಕೆಮ್ಮು ಬಂದರೆ ನೇರವಾಗಿ ಕಫ್ ಸಿರಪ್ ಖರೀದಿಸುವ ಅಭ್ಯಾಸಗಳಿಗೆ ಇನ್ನು ಬ್ರೇಕ್ ಬೀಳಲಿದೆ.

ದೇಶದಾದ್ಯಂತ ಔಷಧ ಮಾರಾಟ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರ, ಇನ್ನು ಮುಂದೆ ಸಿರಪ್ ಆಧಾರಿತ ಔಷಧಿಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಲ್ಲಿ ಕೆಮ್ಮಿನ ಸಿರಪ್‌ಗಳು ಪ್ರಮುಖವಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಕಾಯ್ದೆಯಡಿ ರೂಪಿಸಲಾದ Drugs Rules, 1945 ಗೆ ತಿದ್ದುಪಡಿ ಮಾಡಿದ್ದು, ಈ ಹೊಸ ನಿಯಮ ಜಾರಿಗೆ ಬಂದಿದೆ.

ಏನಿದು ಹೊಸ ನಿಯಮ?

ಇದುವರೆಗೆ ‘Schedule K’ ಅಡಿಯಲ್ಲಿ ಕೆಲವು ಔಷಧಿಗಳಿಗೆ ವಿಶೇಷ ವಿನಾಯಿತಿ ಇತ್ತು. ಆ ಪಟ್ಟಿಯಲ್ಲಿ ‘ಸಿರಪ್’ ಎಂಬ ಪದವೂ ಸೇರಿತ್ತು. ಇದರ ಪರಿಣಾಮವಾಗಿ ಕೆಲವು ಸಂದರ್ಭಗಳಲ್ಲಿ ಸಿರಪ್ ಆಧಾರಿತ ಔಷಧಿಗಳನ್ನು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತಿತ್ತು. ಈಗ ಸರ್ಕಾರ ಆ ಪಟ್ಟಿಯಿಂದ ‘Syrups’ ಎಂಬ ಪದವನ್ನು ತೆಗೆದುಹಾಕಿದೆ. ಪರಿಣಾಮವಾಗಿ ಸಿರಪ್ ರೂಪದ ಔಷಧಿಗಳು ಹೆಚ್ಚು ನಿಯಂತ್ರಣದ ವ್ಯಾಪ್ತಿಗೆ ಬಂದಿವೆ.

ಯಾಕೆ ಈ ನಿರ್ಧಾರ?

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ತಯಾರಾದ ಕೆಲವು ಕಫ್ ಸಿರಪ್‌ಗಳು ವಿದೇಶಗಳಲ್ಲಿ ವಿವಾದಕ್ಕೆ ಕಾರಣವಾಗಿದ್ದವು. ಆಫ್ರಿಕಾ ಮತ್ತು ಮಧ್ಯ ಏಷ್ಯಾದ ಕೆಲವು ದೇಶಗಳಲ್ಲಿ ಕಲುಷಿತ ಸಿರಪ್‌ಗಳಿಗೆ ಸಂಬಂಧಿಸಿದ ಮಕ್ಕಳ ಸಾವಿನ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದವು. ಅದರ ಬಳಿಕ ಔಷಧ ಗುಣಮಟ್ಟ ಮತ್ತು ಮಾರಾಟದ ಮೇಲೆ ಕೇಂದ್ರ ಸರ್ಕಾರ ಹೆಚ್ಚಿನ ನಿಗಾ ವಹಿಸಿದೆ. ಸರ್ಕಾರದ ಪ್ರಕಾರ, ಈ ಹೊಸ ನಿಯಮ ಔಷಧಿಗಳ ಜವಾಬ್ದಾರಿಯುತ ಬಳಕೆ, ಗುಣಮಟ್ಟ ನಿಯಂತ್ರಣ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ನೆರವಾಗಲಿದೆ.

ಯಾವ ಔಷಧಿಗಳಿಗೆ ಪರಿಣಾಮ?

ಕೆಮ್ಮಿನ ಸಿರಪ್ ಮಾತ್ರವಲ್ಲ, ಸಿರಪ್ ರೂಪದಲ್ಲಿ ಮಾರಾಟವಾಗುವ ಹಲವು ಔಷಧಿಗಳ ಖರೀದಿಯ ಮೇಲೂ ಈ ನಿಯಮದ ಪರಿಣಾಮ ಬೀಳಬಹುದು ಎಂದು ವರದಿಗಳು ಸೂಚಿಸಿವೆ. ಆದರೆ ಮಾತ್ರೆಗಳು, ಟ್ಯಾಬ್ಲೆಟ್‌ಗಳು ಮತ್ತು ಲೋಜೆಂಜ್‌ಗಳು (ಚೀಪುವ ಮಾತ್ರೆಗಳು) ಹಿಂದಿನಂತೆಯೇ ಲಭ್ಯವಿರಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !