June 17, 2026
Wednesday, June 17, 2026
spot_img

ಅಪರೂಪದ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನಿಸಿದ ಕಾಸರಗೋಡಿನ ಇಬ್ಬರ ಬಂಧನ

ಹೊಸದಿಗಂತ ವರದಿ ಮಡಿಕೇರಿ:

ಅಪರೂಪದ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಇಬ್ನರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳದ ಕಾಸರಗೋಡು ಜಿಲ್ಲೆಯ ಮಡಿಕೈ ಗುರುವನಂ ರಸ್ತೆ ನಿವಾಸಿ ಶ್ರೀಧರನ್ ಸಿ.ಕೆ‌(70) ಹಾಗೂ ಕಾಸರಗೋಡು ಜಿ.ಕೆ.ನಗರದ ವಿಷ್ಣು ಆಚಾರ್ಯ (68) ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಮಂಗಳವಾರ ಸಂಜೆ 6.30ರ ಸುಮಾರಿಗೆ ಮಡಿಕೇರಿ ನಗರದ ಕನ್ನಂಡ ಪಡುಬೀರ ವೃತ್ತದ ಬಳಿ ಇರುವ ಬಸ್ಸು ತಂಗುದಾಣದಲ್ಲಿ ಇಬ್ಬರು ವ್ಯಕ್ತಿಗಳು ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯನ್ವಯ ಬೆಂಗಳೂರಿನ ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪ ಮಹಾನಿರೀಕ್ಷಕಿ ಸಂಗೀತಾ ಜಿ. ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಟ್ಟೂರು ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್‌ ಉಪನಿರೀಕ್ಷಕ ಶಿವಶಂಕರ್ ಹಾಗೂ ಸಿಬ್ಬಂದಿಗಳಾದ ಉಮೇಶ್ ಎನ್.ಕೆ., ಶನಂತ ಕೆ.ಪಿ, ದಿವ್ಯಶ್ರೀ‌ ಹೆಚ್.ಎಸ್ ಮತ್ತು ಸ್ವಾಮಿ ಎಂ. ಅವರು ಪಾಲ್ಗೊಂಡು ಮಾಲು ಸಹಿತ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್‌ ಅಧೀಕ್ಷಕರ ದೂರವಾಣಿ ಸಂಖ್ಯೆ 9480800220 ಅಥವಾ ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ದೂರವಾಣಿ ಸಂಖ್ಯೆ 8277949812 ನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !