June 17, 2026
Wednesday, June 17, 2026
spot_img

ಈ ಬಾರಿ ಭರ್ಜರಿ ನೇರಳೆ ಫಸಲು: ಇದು ಮುಂದೆ ನಾಡಿಗೆ ಅಪ್ಪಳಿಸುವ ಬರಗಾಲದ ಮುನ್ಸೂಚನೆಯೇ?!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಈ ವರ್ಷ ನೇರಳೆ ಹಣ್ಣಿನ ಫಸಲು ಕಂಡು ಖುದ್ದು ಕೃಷಿಕರೇ ಅಚ್ಚರಿಗೊಳಗಾಗಿದ್ದರೆ. ಗ್ರಾಮೀಣ ಪ್ರದೇಶಗಳಲ್ಲಷ್ಟೇ ಅಲ್ಲ, ನಗರಗಳಲ್ಲೂ ಈಗ ಎಲ್ಲೆಂದರಲ್ಲಿ ನೇರಳೆ ಹಣ್ಣುಗಳ ಮಹಾಪೂರವೇ ಕಾಣಿಸುತ್ತಿದೆ. ಮರದ ಕೆಳಗೆ ಬಿದ್ದಿರುವ ಹಣ್ಣುಗಳನ್ನು ನೋಡಿ ಕೂಡ ಹಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಪರಿಸ್ತಿತಿ ಹೀಗಿರುವಾಗಲೇ ಹಿರಿಯರ ಕಾಲದಲ್ಲಿ ವಾಡಿಕೆಯಲ್ಲಿದ್ದ ‘ನೇರಳೆ ಹಣ್ಣು ವಿಪರೀತವಾಗಿ ಬಂದ ವರ್ಷ ಬರಗಾಲ ಬರುವುದು ಸಾಮಾನ್ಯ’ ಎಂಬ ಮಾತು ಈಗ ಮತ್ತೆ ಜೀವ ಪಡೆದಿದೆ.


ನೇರಳೆ ಹಣ್ಣು ಮತ್ತು ಬರಗಾಲಕ್ಕೆ ಏನು ಸಂಬಂಧ?


ಪ್ರಕೃತಿ ಕೆಲವೊಮ್ಮೆ ಕೆಲವು ಸಂಕೇತಗಳ ಮೂಲಕ ಭವಿಷ್ಯವನ್ನು ತಿಳಿಸುತ್ತದೆ. ಮರಗಳು, ಪಕ್ಷಿಗಳು, ಪ್ರಾಣಿಗಳ ವರ್ತನೆಗಳಲ್ಲಿ ಆಗುವ ಬದಲಾವಣೆಗಳು ಮುಂದಿನ ಹವಾಮಾನದ ಸುಳಿವು ನೀಡುತ್ತವೆ ಎಂಬುದು ಹಲವು ಕಾಲಘಟ್ಟಗಳಲ್ಲಿ ನಿಜವಾಗಿದೆ. ಅದೇ ರೀತಿ ನೇರಳೆ ಮರಗಳು ಅಸಾಮಾನ್ಯ ಪ್ರಮಾಣದಲ್ಲಿ ಹಣ್ಣು ಬಿಡುವುದು ಕೂಡ ಮುಂದಿನ ದಿನಗಳಲ್ಲಿ ಶುಷ್ಕ ವಾತಾವರಣ ಅಥವಾ ನೀರಿನ ಕೊರತೆ ಉಂಟಾಗುವ ಸೂಚನೆಯಾಗಿರಬಹುದು ಎಂಬ ನಂಬಿಕೆ ಹಲವು ತಲೆಮಾರುಗಳಿಂದ ಕೇಳಿಬರುತ್ತಿದೆ. ಕೆಲವು ಬಾರಿ ಅದು ನಿಜವೂ ಆಗಿದೆ.


ವಿಜ್ಞಾನ ಹೇಳುವುದೇನು?


ಸಸ್ಯ ವಿಜ್ಞಾನದಲ್ಲಿ ‘ಸ್ಟ್ರೆಸ್ ಫ್ರೂಟಿಂಗ್’ ಎಂಬ ಪರಿಕಲ್ಪನೆ ಇದೆ. ಪರಿಸರದಲ್ಲಿ ತೀವ್ರ ಬಿಸಿಲು, ನೀರಿನ ಕೊರತೆ ಅಥವಾ ಹವಾಮಾನದ ಒತ್ತಡವನ್ನು ಅನುಭವಿಸುವ ಕೆಲವು ಮರಗಳು ತಮ್ಮ ಸಂತತಿಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಸಾಮಾನ್ಯಕ್ಕಿಂತ ಹೆಚ್ಚು ಹಣ್ಣುಗಳನ್ನು ಉತ್ಪಾದಿಸಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಹಾಗಾದರೆ ಬರಗಾಲ ಖಚಿತವೇ? ಎಂದರೆ ಇಲ್ಲ. ಇಲ್ಲಿಯೇ ಜನರು ಗೊಂದಲಕ್ಕೀಡಾಗುತ್ತಾರೆ.


ನೇರಳೆ ಹಣ್ಣು ಹೆಚ್ಚು ಬಂದರೆ ಬರಗಾಲ ಖಂಡಿತ ಬರುತ್ತದೆ ಎಂದು ಯಾವುದೇ ವೈಜ್ಞಾನಿಕ ಸಂಸ್ಥೆ ಹೇಳಿಲ್ಲ. ಆದರೆ ಮರಗಳು ಪರಿಸರದಲ್ಲಿನ ಕೆಲವು ಬದಲಾವಣೆಗಳಿಗೆ ಪ್ರತಿಕ್ರಿಯೆಯಾಗಿ ಹೆಚ್ಚಿನ ಫಸಲು ನೀಡುವ ಸಾಧ್ಯತೆಯನ್ನು ವಿಜ್ಞಾನ ಒಪ್ಪಿಕೊಳ್ಳುತ್ತದೆ.


ರೈತರಲ್ಲಿ ಏಕೆ ಹೆಚ್ಚಿದೆ ಚರ್ಚೆ?


ಈ ಬಾರಿ ಹಲವೆಡೆ ಬಿಸಿಲಿನ ತೀವ್ರತೆ ಹೆಚ್ಚಿದ್ದದ್ದು, ಕೆಲವು ಪ್ರದೇಶಗಳಲ್ಲಿ ಭೂಗರ್ಭ ಜಲಮಟ್ಟ ಕುಸಿದಿರುವುದು ಮತ್ತು ಹವಾಮಾನ ವೈಪರೀತ್ಯಗಳ ಕುರಿತು ಹೆಚ್ಚುತ್ತಿರುವ ಆತಂಕವೂ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಹೀಗಾಗಿ ನೇರಳೆ ಮರಗಳು ಹಣ್ಣುಗಳಿಂದ ತುಂಬಿರುವ ದೃಶ್ಯ ಕೆಲವರಿಗೆ ಆತಂಕ ಹುಟ್ಟಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !