ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ.
ಭಕ್ತರು ದೇವರ ದರುಶನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು ಶೀಘ್ರದಲ್ಲೇ ವರ್ಚುವಲ್ ಕ್ಯೂ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೇರಳದ ದೇವಸ್ವಂ ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.
ಗುರುವಾಯೂರು ದೇವಸ್ವಂ ಮಂಡಳಿಯ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಸಚಿವರು, ಭಕ್ತರಿಗೆ ಆಧುನಿಕ ಹಾಗೂ ಸುಗಮ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಏನಿದು ವರ್ಚುವಲ್ ಕ್ಯೂ?
ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಮೊಬೈಲ್ ಅಥವಾ ಆನ್‌ಲೈನ್ ಮೂಲಕ ಮುಂಚಿತವಾಗಿ ತಮ್ಮ ದರುಶನ ಬಯಸುವ ಸಮಯವನ್ನು ಕಾಯ್ದಿರಿಸಿಕೊಳ್ಳುವ ವ್ಯವಸ್ಥೆಯೇ ವರ್ಚುವಲ್ ಕ್ಯೂ. ಇದರಿಂದ ದೇವಸ್ಥಾನದ ಹೊರಭಾಗದಲ್ಲಿ ಉದ್ದನೆಯ ಸಾಲುಗಳು ಕಡಿಮೆಯಾಗುವ ಸಾಧ್ಯತೆ ಇದೆ. ತಿರುಪತಿ, ಶಬರಿಮಲೆ ಸೇರಿದಂತೆ ದೇಶದ ಹಲವು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಈಗಾಗಲೇ ಇಂತಹ ವ್ಯವಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈಗ ಗುರುವಾಯೂರೂ ಅದೇ ದಾರಿಯಲ್ಲಿ ಸಾಗಲು ಸಿದ್ಧವಾಗುತ್ತಿದೆ.
ಇದೆ ವೇಳೆ ಗುರುವಾಯೂರು ದೇವಸ್ಥಾನಕ್ಕೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಮೂರು ವರ್ಷಗಳೊಳಗೆ ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ದೇವಾಲಯದ ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದ ಸಚಿವರು, ಗುರುವಾಯೂರು, ಶಬರಿಮಲೆ ಮತ್ತು ಕೊಟ್ಟಿಯೂರು ದೇವಸ್ಥಾನಗಳನ್ನು ಕೇರಳದ ಅತ್ಯುತ್ತಮ ಯಾತ್ರಾ ಕೇಂದ್ರಗಳಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆ ಸರ್ಕಾರದ ಮುಂದಿದೆ ಎಂದು ತಿಳಿಸಿದ್ದಾರೆ.



