June 17, 2026
Wednesday, June 17, 2026
spot_img

ಹೊರಗೆ ಹಳದಿ, ಒಳಗೆ ವಿಷ? ಮಾವು ಖರೀದಿಸುವ ಮುನ್ನ ಇದನ್ನು ತಿಳಿಯದಿದ್ದರೆ ಅಪಾಯ ಖಚಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಈಗ ಮಾರುಕಟ್ಟೆಯೆಲ್ಲಾ ಮಾವಿನ ಹಣ್ಣಿನ ಪರಿಮಳ! ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಆತಂಕ ಹುಟ್ಟಿಸುವುದು ಇವುಗಳ ಮೇಲೆ ಪ್ರಯೋಗ ಆಗಿರುವ ರಾಸಾಯನಿಕ.. ನಾವು ಖರೀದಿಸುವ ಮಾವು ನೈಸರ್ಗಿಕವಾಗಿ ಹಣ್ಣಾಗಿದೆಯೇ ಅಥವಾ ರಾಸಾಯನಿಕಗಳ ನೆರವಿನಿಂದ ಬೇಗ ಮಾಗಿಸಲಾಗಿದೆಯೇ? ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸಿಂಪಲ್ ಕೆಲವೊಂದು ಟ್ರಿಕ್ಸ್ !


ಬಣ್ಣವೇ ಮೊದಲ ಸುಳಿವು


ಮಾವು ಸಂಪೂರ್ಣವಾಗಿ ಒಂದೇ ರೀತಿಯ ಗಾಢ ಹಳದಿ ಅಥವಾ ಚಿನ್ನದ ಬಣ್ಣದಲ್ಲಿದ್ದರೆ ಎಚ್ಚರಿಕೆಯಿಂದಿರಬೇಕು. ನೈಸರ್ಗಿಕವಾಗಿ ಹಣ್ಣಾಗಿರುವ ಮಾವುಗಳಲ್ಲಿ ಸಾಮಾನ್ಯವಾಗಿ ಹಸಿರು, ಹಳದಿ ಮತ್ತು ಕಿತ್ತಳೆ ಬಣ್ಣಗಳ ಮಿಶ್ರಣ ಕಾಣಬಹುದು. ಪ್ರತಿಯೊಂದು ಹಣ್ಣಿನ ಬಣ್ಣವೂ ಒಂದೇ ರೀತಿಯಾಗಿರುವುದಿಲ್ಲ.


ಕಾಂಡದ ಬಳಿ ವಾಸನೆ ನೋಡಿ


ನೈಸರ್ಗಿಕವಾಗಿ ಮಾಗಿರುವ ಮಾವಿನಿಂದ ಸಿಹಿಯಾದ, ತಾಜಾ ಪರಿಮಳ ಬರುತ್ತದೆ. ವಿಶೇಷವಾಗಿ ಕಾಂಡದ ಭಾಗದಲ್ಲಿ ಮೂಗು ಹತ್ತಿಸಿದರೆ ಅದರ ಸುಗಂಧ ಸ್ಪಷ್ಟವಾಗಿ ಅನುಭವವಾಗುತ್ತದೆ. ಆದರೆ ಯಾವುದೇ ವಾಸನೆ ಇಲ್ಲದಿದ್ದರೆ ಅಥವಾ ರಾಸಾಯನಿಕದಂತಿರುವ ವಿಚಿತ್ರ ವಾಸನೆ ಕಂಡುಬಂದರೆ ಅದು ಕೃತಕವಾಗಿ ಹಣ್ಣಾಗಿಸಿರುವ ಸಾಧ್ಯತೆ ಇರುತ್ತದೆ.


ಕೈಯಲ್ಲಿ ಎತ್ತಿಕೊಂಡು ಪರೀಕ್ಷಿಸಿ


ಒಳ್ಳೆಯ ಮಾವು ಸ್ವಲ್ಪ ಮೃದುವಾಗಿರುತ್ತದೆ. ಆದರೆ ತುಂಬಾ ಮೆತ್ತಗಾಗಿರುವುದಿಲ್ಲ. ಬೆರಳಿನಿಂದ ನಿಧಾನವಾಗಿ ಒತ್ತಿದಾಗ ಸ್ವಲ್ಪ ಒಳಕ್ಕೆ ಹೋಗಿ ಮತ್ತೆ ತನ್ನ ಆಕಾರಕ್ಕೆ ಬರಬೇಕು. ಅತಿಯಾಗಿ ಗಟ್ಟಿಯಾಗಿದ್ದರೆ ಅಥವಾ ಹೊರಗೆ ಮೃದುವಾಗಿದ್ದರೂ ಒಳಗೆ ಗಟ್ಟಿಯಾಗಿದ್ದರೆ ಅದು ಸಹಜವಾಗಿ ಹಣ್ಣಾಗಿಲ್ಲದಿರಬಹುದು.

ಕತ್ತರಿಸಿದಾಗ ಸತ್ಯ ಗೊತ್ತಾಗುತ್ತದೆ!

ಹೊರಗೆ ಹಳದಿಯಾಗಿ ಕಾಣುವ ಮಾವು ಒಳಗೆ ಬಿಳಿ ಅಥವಾ ತೆಳುವಾದ ಹಳದಿ ಬಣ್ಣದಲ್ಲಿದ್ದರೆ, ಅದರ ತಿರುಳು ರಬ್ಬರ್‌ನಂತೆ ಕಂಡರೆ ಅಥವಾ ರುಚಿ ಕಡಿಮೆಯಿದ್ದರೆ ಅದು ಸಮರ್ಪಕವಾಗಿ ನೈಸರ್ಗಿಕವಾಗಿ ಮಾಗಿಲ್ಲದ ಸೂಚನೆಯಾಗಿರಬಹುದು. ನೈಸರ್ಗಿಕವಾಗಿ ಹಣ್ಣಾದ ಮಾವಿನ ತಿರುಳು ಸಮಾನವಾಗಿ ಮೃದುವಾಗಿದ್ದು, ರಸ ಮತ್ತು ಸಿಹಿತನ ಹೆಚ್ಚಿರುತ್ತದೆ.


ನೀರಿನ ಪರೀಕ್ಷೆ ನಿಜವೇ?


ಸಾಮಾಜಿಕ ಜಾಲತಾಣಗಳಲ್ಲಿ ಮಾವನ್ನು ನೀರಿನಲ್ಲಿ ಹಾಕಿ ಪರೀಕ್ಷಿಸುವ ಸಲಹೆ ಹರಿದಾಡುತ್ತಿದೆ. ಕೆಲವು ಮೂಲಗಳು ನೀರಿನಲ್ಲಿ ಮುಳುಗುವ ಮಾವು ಉತ್ತಮ ಎಂದು ಹೇಳುತ್ತವೆ. ಆದರೆ ಆಹಾರ ತಜ್ಞರ ಪ್ರಕಾರ, ಇದು ನಿಖರ ವೈಜ್ಞಾನಿಕ ಪರೀಕ್ಷೆಯಲ್ಲ. ಹಣ್ಣಿನ ಗಾತ್ರ, ದಟ್ಟತೆ ಮತ್ತು ತೇವಾಂಶದ ಮೇಲೆ ಫಲಿತಾಂಶ ಬದಲಾಗಬಹುದು. ಆದ್ದರಿಂದ ಬಣ್ಣ, ವಾಸನೆ ಮತ್ತು ತಿರುಳಿನ ಗುಣಮಟ್ಟವೇ ಹೆಚ್ಚು ವಿಶ್ವಾಸಾರ್ಹ ಸೂಚಕಗಳು.


ಮಾವು ನಕಲಿ ಆಗಿರುವುದಿಲ್ಲ. ಆದರೆ ಕೆಲವು ಮಾವುಗಳನ್ನು ಕೃತಕವಾಗಿ ಹಣ್ಣಾಗಿಸಲಾಗಿರಬಹುದು. ಆದ್ದರಿಂದ ಕೇವಲ ಹೊಳೆಯುವ ಬಣ್ಣ ನೋಡಿ ಖರೀದಿಸುವ ಬದಲು, ಅದರ ವಾಸನೆ, ಸ್ಪರ್ಶ ಮತ್ತು ರೂಪವನ್ನು ಗಮನಿಸುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !