ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಟಿ20 ವಿಶ್ವಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕ್ಲಿನಿಕಲ್ ಪ್ರದರ್ಶನ ನೀಡಿದ ಭಾರತ ತಂಡ, ನೆದರ್‌ಲ್ಯಾಂಡ್ಸ್ ವಿರುದ್ಧ 95 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯಲ್ಲಿ ಸತತ ಎರಡನೇ ಜಯ ಸಾಧಿಸಿದೆ.
ಭಾರತದ ಬೃಹತ್ ಮೊತ್ತ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಎದುರಾಳಿ ಬೌಲರ್‌ಗಳನ್ನು ದಂಡಿಸಿ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. 210 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ನೆದರ್‌ಲ್ಯಾಂಡ್ಸ್ ತಂಡ, ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 17.3 ಓವರ್‌ಗಳಲ್ಲಿ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು.
ಪಾಯಿಂಟ್ಸ್ ಟೇಬಲ್‌ನಲ್ಲಿ ನಂ.1 ಸ್ಥಾನ
ಈ ಭರ್ಜರಿ ಗೆಲುವಿನೊಂದಿಗೆ ಒಟ್ಟು 4 ಅಂಕ ಹಾಗೂ +3.975 ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿರುವ ಬ್ಲೂ ಬ್ರಿಗೇಡ್, ಬಲಿಷ್ಠ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಗ್ರೂಪ್-1 ರಲ್ಲಿ ಅಗ್ರಸ್ಥಾನಕ್ಕೇರಿದೆ.
ಬೌಲಿಂಗ್‌ನಲ್ಲಿ ಮಿಂಚಿದ ಶ್ರೀ ಚರಣಿ, ಶಫಾಲಿ
ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಶ್ರೀ ಚರಣಿ 4 ವಿಕೆಟ್ ಕಿತ್ತು ಎದುರಾಳಿಗಳ ಬೆನ್ನೆಲುಬು ಮುರಿದರು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಶಫಾಲಿ ವರ್ಮಾ ಬೌಲಿಂಗ್‌ನಲ್ಲೂ ಮ್ಯಾಜಿಕ್ ಮಾಡಿ 3 ವಿಕೆಟ್ ಕಲೆಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಂದಿನಿ ಶರ್ಮಾ 2 ವಿಕೆಟ್ ಹಾಗೂ ದೀಪ್ತಿ ಶರ್ಮಾ 1 ವಿಕೆಟ್ ಪಡೆದು ಭಾರತದ ಗೆಲುವನ್ನು ಸುಲಭಗೊಳಿಸಿದರು.



