ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಭಿನ್ನಮತದ ಬಿರುಗಾಳಿ ಎದ್ದಿದ್ದು, ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೆ ಸೀಳು ಉಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಊಹಾಪೋಹಗಳ ನಡುವೆ, ಪಕ್ಷವನ್ನು ಒಗ್ಗಟ್ಟಾಗಿಡಲು ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯಲ್ಲಿ ಲೋಕಸಭಾ ಸದಸ್ಯರ ತುರ್ತು ಹಾಗೂ ನಿರ್ಣಾಯಕ ಸಭೆ ಕರೆದಿದ್ದಾರೆ. ಯಾರೂ ಕೈಕೊಡದಂತೆ ತಡೆಯಲು ಎಲ್ಲಾ ಸಂಸದರಿಗೂ ಕಡ್ಡಾಯ ಹಾಜರಾತಿಯ ವಿಪ್ ಜಾರಿ ಮಾಡಲಾಗಿದೆ.
ಓಂ ಬಿರ್ಲಾ ಭೇಟಿಯಾದ ಬಂಡಾಯ ಸಂಸದರು!
ಯುಬಿಟಿ ಪಕ್ಷದ ಒಟ್ಟು 9 ಲೋಕಸಭಾ ಸಂಸದರಲ್ಲಿ 6 ಸಂಸದರು ತಮ್ಮ ಕಡೆಯೇ ಇದ್ದಾರೆ ಎಂದು ಬಂಡಾಯ ನಾಯಕರ ಗುಂಪೊಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಹಕ್ಕು ಮಂಡಿಸಿದೆ. ಈ ರೆಬೆಲ್ ಸಂಸದರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ತಲಾ ₹50 ಕೋಟಿ ಆಫರ್? ರಾವತ್ ಸ್ಫೋಟಕ ಆರೋಪ
“ಸಂಸದರನ್ನು ಸೆಳೆಯಲು ತಲಾ 50 ಕೋಟಿ ರೂಪಾಯಿ ಆಫರ್ ನೀಡಲಾಗಿದೆ” ಎಂದು ಉದ್ಧವ್ ಆಪ್ತ, ರಾಜ್ಯಸಭಾ ಸಂಸದ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ.
ಕಾನೂನಿನ ಚೌಕಟ್ಟು ಮತ್ತು ವಿಲೀನದ ಸವಾಲು
ಮತ್ತೊಂದೆಡೆ, ಶಿವಸೇನೆ (ಯುಬಿಟಿ) ಸಂಸದ ಅನಿಲ್ ದೇಸಾಯಿ ಪ್ರತಿಕ್ರಿಯಿಸಿ, “ಬಂಡಾಯಗಾರರು ಕಾನೂನಿನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಕೇವಲ ಮೂರನೇ ಎರಡರಷ್ಟು (6 ಸಂಸದರು) ಬಹುಮತ ಇದ್ದ ತಕ್ಷಣ ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಲು ಕಾನೂನಿನಲ್ಲಿ ಅವಕಾಶವಿಲ್ಲ. ಮೂಲ ಪಕ್ಷದ ಒಪ್ಪಿಗೆಯಿದ್ದರೆ ಮಾತ್ರ ವಿಲೀನ ಸಾಧ್ಯ. ಹಾಗಾಗಿ ಸ್ಪೀಕರ್ ನಿಯಮಗಳ ಪ್ರಕಾರ ಬಂಡಾಯಗಾರರನ್ನು ಮಾನ್ಯ ಮಾಡಲು ಬರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.



