ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿ.ಡಿ. ಸತೀಶನ್ ನೇತೃತ್ವದ ಕೇರಳದ ಹೊಸ ಸರ್ಕಾರದ ಮೊದಲ ಬಜೆಟ್ ನಾಳೆ ಮಂಡನೆಯಾಗಲಿದ್ದು, ರಾಜ್ಯ ರಾಜಕೀಯ ವಲಯದಿಂದ ಹಿಡಿದು ಸಾಮಾನ್ಯ ಜನರ ವರೆಗೆ ಎಲ್ಲರ ಕಣ್ಣು ಈಗ ವಿಧಾನಸಭೆಯತ್ತ ನೆಟ್ಟಿದೆ.
ಮಹಿಳೆಯರಿಗೆ ಮಾಸಿಕ ಭತ್ಯೆ, ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ರದ್ದು, ಸಾಮಾಜಿಕ ಭದ್ರತಾ ಪಿಂಚಣಿ ಹೆಚ್ಚಳ, ಯುವಕರಿಗೆ ಬಡ್ಡಿರಹಿತ ಸಾಲ ಸೇರಿದಂತೆ ಹಲವು ಮಹತ್ವದ ಘೋಷಣೆಗಳು ಬಜೆಟ್‌ನಲ್ಲಿ ಇರಬಹುದು ಎಂಬ ಚರ್ಚೆಗಳು ಈಗಾಗಲೇ ಆರಂಭವಾಗಿದೆ.
ಪೆಟ್ರೋಲ್-ಡೀಸೆಲ್ ಸೆಸ್‌ಗೆ ಗುಡ್‌ಬೈ?
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಹೊರೆ ಈಗಾಗಲೇ ಜನರನ್ನು ಕಾಡುತ್ತಿದೆ. ಈ ನಡುವೆ ಸರ್ಕಾರ ಇಂಧನ ಸೆಸ್ ಹಿಂಪಡೆಯುವ ಘೋಷಣೆ ಮಾಡಬಹುದೇ ಎಂಬ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಎಲ್ಲಾ ಮಹಿಳಾ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ₹1,000 ನೆರವು ನೀಡುವ ಯೋಜನೆ ಬಜೆಟ್‌ನ ಪ್ರಮುಖ ಆಕರ್ಷಣೆಯಾಗಬಹುದು ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ.
ಇದನ್ನೂ ಓದಿ:
ಪಿಂಚಣಿ ಹೆಚ್ಚಳದ ಘೋಷಣೆ ಬರಬಹುದೇ?
ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಫಲಾನುಭವಿಗಳ ಕಣ್ಣು ಕೂಡ ಈ ಬಜೆಟ್ ಮೇಲೆ ನೆಟ್ಟಿದೆ. ಪಿಂಚಣಿಯನ್ನು ಹಂತ ಹಂತವಾಗಿ ₹3,000ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಒಂದೇ ಬಾರಿಗೆ ಹೆಚ್ಚಳವಾಗಲಿದೆಯೇ ಅಥವಾ ಹಂತ ಹಂತವಾಗಿ ಜಾರಿಯಾಗುತ್ತದೆಯೇ ಎಂಬುದು ನಾಳೆಯ ಬಜೆಟ್‌ನಲ್ಲಿ ಸ್ಪಷ್ಟವಾಗಲಿದೆ.
ಯುವಕರಿಗೆ ಸಿಗಲಿದೆಯೇ ಸಿಹಿ ಸುದ್ದಿ?
ಉದ್ಯೋಗದ ಜೊತೆಗೆ ಉದ್ಯಮ ಆರಂಭಿಸಲು ಬಯಸುವ ಯುವಕರಿಗಾಗಿ ₹5 ಲಕ್ಷದವರೆಗೆ ಬಡ್ಡಿರಹಿತ ಸಾಲ ಘೋಷಣೆ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಯೋಜನೆ ಜಾರಿಗೆ ಬಂದರೆ ಹೊಸ ಉದ್ಯಮ ಆರಂಭಿಸುವ ಯುವಕರಿಗೆ ದೊಡ್ಡ ಉತ್ತೇಜನ ಸಿಗುವ ಸಾಧ್ಯತೆ ಇದೆ. ಇನ್ನು ಆಶಾ ಕಾರ್ಯಕರ್ತರು, ಕುಟುಂಬಶ್ರೀ ಸಿಬ್ಬಂದಿ, ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಂಬಂಧಿಸಿದ ಘೋಷಣೆಗಳೂ ಬಜೆಟ್‌ನಲ್ಲಿ ಇರಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕಂಡುಬರುತ್ತಿದೆ.
ಆದರೆ ರಾಜ್ಯದ ಆರ್ಥಿಕ ಸ್ಥಿತಿ ಈಗಾಗಲೇ ಒತ್ತಡದಲ್ಲಿದ್ದು, ಸರ್ಕಾರದ ಒಟ್ಟು ಸಾಲ ಲಕ್ಷಾಂತರ ಕೋಟಿಗಳ ಮಟ್ಟದಲ್ಲಿದೆ. ಹೀಗಾಗಿ ಜನಪರ ಘೋಷಣೆಗಳ ಜೊತೆಗೆ ಆದಾಯ ಹೆಚ್ಚಿಸುವ ಹೊಸ ಮಾರ್ಗಗಳನ್ನೂ ಸರ್ಕಾರ ಘೋಷಿಸಬೇಕಾದ ಅನಿವಾರ್ಯತೆ ಎದುರಾಗಿದೆ.



