June 18, 2026
Thursday, June 18, 2026
spot_img

ಅಪಾಯದ ಗಂಟೆ ಬಾರಿಸಿವೆ ಜಲಾಶಯಗಳು: ಪ್ರಮುಖ 166 ಅಣೆಕಟ್ಟುಗಳಲ್ಲಿ ಉಳಿದಿರುವುದು ಕೇವಲ 28% ನೀರು?

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕೇಂದ್ರ ಜಲ ಆಯೋಗ ಷಾಕಿಂಗ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ದೇಶದ 166 ಪ್ರಮುಖ ಜಲಾಶಯಗಳಲ್ಲಿ ಒಟ್ಟು ಸಂಗ್ರಹ ಸಾಮರ್ಥ್ಯದ ಕೇವಲ ಶೇ.28.28ರಷ್ಟು ನೀರು ಮಾತ್ರ ಲಭ್ಯವಿದೆ ಎಂದು ಹೇಳಿದೆ.


ಈ ಅಂಕಿ-ಅಂಶಗಳು ಮುಂದಿನ ಕೃಷಿ, ಕುಡಿಯುವ ನೀರು, ಜಲವಿದ್ಯುತ್ ಕ್ಷೇತ್ರಗಳ ಭವಿಷ್ಯದ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮುಂಗಾರು ಹಂಗಾಮಿನ ಆರಂಭದಲ್ಲೇ ಜಲಾಶಯಗಳ ಸ್ಥಿತಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕೆಲವು ವಾರಗಳ ಮಳೆ ದೇಶದ ನೀರಿನ ಭದ್ರತೆಯನ್ನು ನಿರ್ಧರಿಸಲಿದೆ.


ಕೇಂದ್ರ ಜಲ ಆಯೋಗದ ಪ್ರಕಾರ, ದೇಶದ 166 ಪ್ರಮುಖ ಜಲಾಶಯಗಳ ಒಟ್ಟು ನೀರು ಸಂಗ್ರಹ ಸಾಮರ್ಥ್ಯ ಸುಮಾರು 183.56 ಬಿಲಿಯನ್ ಕ್ಯುಬಿಕ್ ಮೀಟರ್ (BCM) ಆಗಿದೆ. ಆದರೆ ಜೂನ್ ಮಧ್ಯಭಾಗದ ವೇಳೆಗೆ ಈ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕೇವಲ 51.92 ಬಿಲಿಯನ್ ಕ್ಯುಬಿಕ್ ಮೀಟರ್ ಮಾತ್ರ. ಅಂದರೆ ಒಟ್ಟು ಸಾಮರ್ಥ್ಯದ ಶೇ.28.28ರಷ್ಟು ಮಾತ್ರ ನೀರು ಲಭ್ಯವಿದೆ. ಮಳೆ ಕೊರತೆಯಿಂದಾಗಿ ಹಲವೆಡೆ ಜಲಾಶಯಗಳಿಗೆ ಒಳಹರಿವು ನಿರೀಕ್ಷಿತ ಮಟ್ಟ ತಲುಪಿಲ್ಲ.


ಯಾವ ಭಾಗದಲ್ಲಿ ಹೆಚ್ಚು ಆತಂಕ?
ಪೂರ್ವ ಭಾರತದ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿದ್ದರೆ ದಕ್ಷಿಣ ಭಾರತದಲ್ಲೂ ಪರಿಸ್ಥಿತಿ ಆತಂಕಕಾರಿಯಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ವ್ಯಾಪ್ತಿಯಲ್ಲಿರುವ 47 ಪ್ರಮುಖ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯದ ಕೇವಲ ಶೇ. 20.98ರಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಈ ಜಲಾಶಯಗಳಲ್ಲಿ ಸುಮಾರು 55.29 ಬಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗಬೇಕಿದ್ದ ಅವಧಿಯಲ್ಲಿ ಸದ್ಯ ಕೇವಲ 11.60 ಬಿಲಿಯನ್ ಕ್ಯುಬಿಕ್ ಮೀಟರ್ ನೀರಿನ ಸಂಗ್ರಹವಿದೆ.


ಇನ್ನು ಕೆಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಶೂನ್ಯದ ಸಮೀಪಕ್ಕೆ ತಲುಪಿದೆ. ಚಂದನ್, ಭೀಮಾ ಉಜನಿ, ಮೌದಾ ಹಾಗೂ ನಾನಕ್ ಸಾಗರ್ ಜಲಾಶಯಗಳ ಪರಿಸ್ಥಿತಿ ಹೆಚ್ಚು ಆತಂಕಕಾರಿಯಾಗಿದೆ.


ಮಳೆ ಕೊರತೆ ಮುಂದುವರಿದರೆ ಭತ್ತ, ಕಬ್ಬು, ಹತ್ತಿ ಸೇರಿದಂತೆ ಹಲವು ಬೆಳೆಗಳ ಬೆಳವಣಿಗೆ ಮೇಲೆ ಪರಿಣಾಮ ಬೀಳಬಹುದು ಎಂಬ ಆತಂಕ ವ್ಯಕ್ತವಾಗಿದೆ. ವಿಶೇಷವಾಗಿ ಮುಂಗಾರು ಮಳೆಯನ್ನೇ ನಂಬಿಕೊಂಡಿರುವ ರಾಜ್ಯಗಳಲ್ಲಿ ರೈತರು ಈಗಾಗಲೇ ಆಕಾಶದತ್ತ ಕಣ್ಣಿಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !