ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿರುವ ಪ್ಯಾರಾ ಅಥ್ಲೀಟ್, ಹೆಮ್ಮೆಯ ಕನ್ನಡತಿ ಶಿಲ್ಪಾ ಕೆ.ಶೈಲಾ ಅವರನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗೌರವಪೂರ್ವಕವಾಗಿ ಸತ್ಕರಿಸಿದ್ದಾರೆ. ಸಾಧಕಿಯ ಮನೆಗೆ ಭೇಟಿ ನೀಡಿದ ಅವರು, ಶಿಲ್ಪಾ ಹಾಗೂ ಅವರ ತರಬೇತುದಾರರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಅಂಗವೈಕಲ್ಯ ಮೆಟ್ಟಿ ನಿಂತ ರೈತನ ಮಗಳ ಐತಿಹಾಸಿಕ ಸಾಧನೆ
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಸಾಮಾನ್ಯ ರೈತ ಕುಟುಂಬದ ಮಗಳಾದ ಶಿಲ್ಪಾ, ತಮ್ಮ ನಾಲ್ಕನೇ ವಯಸ್ಸಿನಲ್ಲೇ ಸಂಭವಿಸಿದ ಭೀಕರ ಅಪಘಾತದಲ್ಲಿ ಎಡಗಾಲನ್ನು ಕಳೆದುಕೊಂಡಿದ್ದರು. ಆದರೆ, ಈ ದೈಹಿಕ ಸವಾಲು ಮತ್ತು ನೋವನ್ನು ದಿಟ್ಟತನದಿಂದ ಎದುರಿಸಿದ ಅವರು, ತಮ್ಮ ದೃಢ ಸಂಕಲ್ಪದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಧ್ವಜ ಹಾರುವಂತೆ ಮಾಡಿದ್ದಾರೆ. ಈ ಮೂಲಕ ಇಡೀ ರಾಷ್ಟ್ರವೇ ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಯುವ ಪೀಳಿಗೆಗೆ ಶಿಲ್ಪಾ ಶೈಲಾ ಮಾದರಿ: ಹೆಚ್‌ಡಿಕೆ ಶ್ಲಾಘನೆ
ಮನೆಗೆ ಬಂದ ಸಾಧಕಿಯನ್ನು ಬರಮಾಡಿಕೊಂಡು ಸತ್ಕರಿಸಿದ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, “ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಶಿಲ್ಪಾ ಅವರದ್ದು ಅತ್ಯಂತ ಪ್ರೇರಣಾದಾಯಕ ಸಾಧನೆ. ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯವರೇ ಆದ ಇವರು ಇಂದಿನ ಯುವ ತಲೆಮಾರಿಗೆ ನಿಜವಾದ ಮಾದರಿಯಾಗಿದ್ದಾರೆ” ಎಂದು ಕೊಂಡಾಡಿದರು. ಇದೇ ಸಂದರ್ಭದಲ್ಲಿ ಶಿಲ್ಪಾ ಅವರ ಸಾಧನೆಯ ಹಿಂದಿನ ಶಕ್ತಿಯಾದ ತರಬೇತುದಾರ ಸತ್ಯನಾರಾಯಣ ಹಾಗೂ ಪುಷ್ಪಾ ನಿರಂಜನ್ ಪ್ರಸಾದ್ ಅವರನ್ನು ಸಹ ಅತ್ಯಂತ ಗೌರವದಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ:
ಪದಕ ಗೆದ್ದ ರೋಚಕ ಕ್ಷಣ
ಸ್ಪರ್ಧೆಯಲ್ಲಿ ಶಿಲ್ಪಾ ಅವರು 7.26 ಮೀಟರ್ ದೂರ ಎಸೆದು ನಾಲ್ಕನೇ ಸ್ಥಾನ ಪಡೆದಿದ್ದರು. ಆದರೆ, ಮೂರನೇ ಸ್ಥಾನದಲ್ಲಿದ್ದ ನೈಜೀರಿಯಾದ ಆಟಗಾರ್ತಿ ಯುಚೇರಿಯಾ ಇಯಾಜಿ ಅವರ ಎಸೆತವು ನಿಯಮಬಾಹಿರ ಎಂದು ಭಾರತೀಯ ತಂಡ ಅಧಿಕೃತವಾಗಿ ಪ್ರತಿಭಟಿಸಿತು. ಕ್ರೀಡಾ ಮಂಡಳಿಯು ವಿಡಿಯೋ ಪರಿಶೀಲನೆ ನಡೆಸಿ ನೈಜೀರಿಯಾ ಆಟಗಾರ್ತಿಯನ್ನು ಅನರ್ಹಗೊಳಿಸಿದಾಗ, ಶಿಲ್ಪಾ ಅವರಿಗೆ ಕಂಚಿನ ಪದಕ ಒಲಿಯಿತು. ಇದೇ ಕ್ರೀಡಾಕೂಟದ ಇದೇ ವಿಭಾಗದಲ್ಲಿ ಭಾರತದ ಮತ್ತೊಬ್ಬ ಪ್ಯಾರಾ ಅಥ್ಲೀಟ್ ಶರ್ಮಿಳಾ ಧನಕರ್ ಬಂಗಾರದ ಪದಕ ಗೆದ್ದಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್ ಇತಿಹಾಸದಲ್ಲೇ ಭಾರತ ಮೊದಲ ಬಾರಿಗೆ ‘ಡಬಲ್ ಪೋಡಿಯಂ’ ಸಾಧನೆ ಮಾಡಿತು.



