June 18, 2026
Thursday, June 18, 2026
spot_img

ಆಂಧ್ರ ಮೂಲದ ಕಂಪನಿಯಿಂದ ಕೋಟ್ಯಂತರ ರೂ. ವಂಚನೆ: ಉದ್ಯೋಗದ ಆಮಿಷಕ್ಕೆ 470ಕ್ಕೂ ಹೆಚ್ಚು ಜನ ಬಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉದ್ಯೋಗ ನೀಡುವ ನೆಪದಲ್ಲಿ ಆಂಧ್ರಪ್ರದೇಶ ಮೂಲದ ಖಾಸಗಿ ಕಂಪನಿಯೊಂದು ಚಿತ್ರದುರ್ಗದ ನೂರಾರು ಅಮಾಯಕರಿಗೆ ಕೋಟ್ಯಂತರ ರೂ. ವಂಚಿಸಿ ರಾತ್ರೋರಾತ್ರಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿನ ಆಕರ್ಷಕ ಜಾಹೀರಾತುಗಳನ್ನು ನಂಬಿ ಹೂಡಿಕೆ ಮಾಡಿದ್ದ ಗೃಹಿಣಿಯರು, ನಿರುದ್ಯೋಗಿ ಯುವಕರು ಮತ್ತು ಕೂಲಿ ಕಾರ್ಮಿಕರು ಈಗ ತಮಗಾದ ವಂಚನೆ ಖಂಡಿಸಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಮನೆಯಿಂದಲೇ ಕೆಲಸ: ಆಮಿಷ ಒಡ್ಡಿದ್ದು ಹೇಗೆ?

ಆಂಧ್ರಪ್ರದೇಶ ಮೂಲದ ಎಸ್‌ಎಲ್‌ವಿ (SLV) ಕಂಪನಿಯ ಮುಖ್ಯಸ್ಥ ರಾಜೇಶ್ ಬೊಮ್ಮಾಲ ಎಂಬಾತ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಭಾರಿ ಪ್ರಚಾರ ನಡೆಸಿದ್ದ. ಮನೆಯಲ್ಲೇ ಕುಳಿತು ಊದುಬತ್ತಿ, ಮೇಣದಬತ್ತಿ ಹಾಗೂ ಮ್ಯಾಟ್‌ಗಳನ್ನು ಪ್ಯಾಕಿಂಗ್ ಮಾಡುವ ಸರಳ ಕೆಲಸ ನೀಡುವುದಾಗಿ ನಂಬಿಸಿದ್ದ. ಆರಂಭಿಕ ಒಪ್ಪಂದದ ಪ್ರಕಾರ, ಕಂಪನಿಗೆ 1 ಲಕ್ಷ ಭದ್ರತಾ ಠೇವಣಿ ಪಾವತಿಸಿದರೆ, ಪ್ರತಿ ತಿಂಗಳು 20,000 ರಿಂದ 28,000 ವರೆಗೆ ನಿಶ್ಚಿತ ಸಂಬಳ ಮತ್ತು ಕಮಿಷನ್ ನೀಡುವುದಾಗಿ ಭರವಸೆ ನೀಡಲಾಗಿತ್ತು.

70 ಕೋಟಿಗೂ ಅಧಿಕ ಲೂಟಿ!

ಆರಂಭದಲ್ಲಿ ಕೆಲವರಿಗೆ ಹಣ ನೀಡಿ ನಂಬಿಕೆ ಗಳಿಸಿದ್ದ ಕಂಪನಿ, ಆ ಮೂಲಕವೇ ಸಾರ್ವಜನಿಕರಿಂದ ದೊಡ್ಡ ಮಟ್ಟದ ಹೂಡಿಕೆ ಹರಿದುಬರುವಂತೆ ಮಾಡಿಕೊಂಡಿತ್ತು. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಅಂದಾಜು 470ಕ್ಕೂ ಹೆಚ್ಚು ಜನರು ಫೈನಾನ್ಸ್ ಹಾಗೂ ಬ್ಯಾಂಕ್‌ಗಳಲ್ಲಿ ಚಿನ್ನ ಅಡವಿಟ್ಟು, ಸಾಲ ಮಾಡಿ ಲಕ್ಷಾಂತರ ರೂ. ಹಣ ಹೂಡಿಕೆ ಮಾಡಿದ್ದರು. ಸಾರ್ವಜನಿಕರಿಂದ ಹಂತ-ಹಂತವಾಗಿ ಸುಮಾರು 60 ರಿಂದ 70 ಕೋಟಿ ರೂ. ಸಂಗ್ರಹವಾಗುತ್ತಿದ್ದಂತೆ ಮುಖ್ಯ ಆರೋಪಿ ರಾಜೇಶ್ ಬೊಮ್ಮಾಲ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ:

ಪೊಲೀಸ್ ತನಿಖೆ ತೀವ್ರ

ಹಣ ಕಳೆದುಕೊಂಡು ದಿಕ್ಕುತೋಚದಂತಾದ ಸಂತ್ರಸ್ತರು ಚಿತ್ರದುರ್ಗದ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಮುಖ್ಯ ಆರೋಪಿ ರಾಜೇಶ್ ಬೊಮ್ಮಾಲ ಹಾಗೂ ಸ್ಥಳೀಯ ಮ್ಯಾನೇಜರ್ ಕೃಷ್ಣಮೂರ್ತಿ ಸೇರಿದಂತೆ ವಂಚನೆ ಜಾಲದಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಮುಂದುವರೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !