ಒಂದು ಕಾಲದಲ್ಲಿ ಬೊಜ್ಜು (ಸ್ಥೂಲಕಾಯತೆ) ಕೇವಲ ದೇಹದ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ಇದು ಮೂತ್ರಪಿಂಡದ ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಮತ್ತು ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಗುರುತಿಸಲಾಗಿದೆ.
ಕುಳಿತುಕೊಂಡೇ ಹೆಚ್ಚು ಸಮಯ ಕಳೆಯುವ ಜೀವನಶೈಲಿ, ಮೊಬೈಲ್ ಮತ್ತು ಇತರೆ ಪರದೆಗಳ (ಸ್ಕ್ರೀನ್‌ಗಳ) ಅತಿಯಾದ ಬಳಕೆ, ಹಾಗೂ ಹೆಚ್ಚು ಕ್ಯಾಲೊರಿಯುಕ್ತ ಆಹಾರಗಳ ಸುಲಭ ಲಭ್ಯತೆ ಇವುಗಳ ಪರಿಣಾಮವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಬೊಜ್ಜಿನ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಸ್ಥೂಲಕಾಯತೆ ಮತ್ತು ಮೂತ್ರಪಿಂಡದ ಕ್ಯಾನ್ಸರ್ ನಡುವಿನ ಸಂಬಂಧವು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಕಾಳಜಿಯ ವಿಷಯವಾಗಿದೆ.
ಮೂತ್ರಪಿಂಡಗಳು ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಒಂದಾಗಿವೆ. ಇವು ರಕ್ತವನ್ನು ಶುದ್ಧೀಕರಿಸಿ, ದೇಹದಲ್ಲಿನ ತ್ಯಾಜ್ಯ ಪದಾರ್ಥಗಳು ಮತ್ತು ಹೆಚ್ಚುವರಿ ನೀರನ್ನು ಮೂತ್ರದ ಮೂಲಕ ಹೊರಹಾಕುವ ಕೆಲಸ ಮಾಡುತ್ತವೆ. ಮೂತ್ರಪಿಂಡದ ಕೋಶಗಳು ಅಸಹಜವಾಗಿ ಮತ್ತು ನಿಯಂತ್ರಣವಿಲ್ಲದೆ ಬೆಳೆಯಲು ಆರಂಭಿಸಿದಾಗ ಮೂತ್ರಪಿಂಡದ ಕ್ಯಾನ್ಸರ್ ಉಂಟಾಗುತ್ತದೆ. ಮೂತ್ರಪಿಂಡದ ಕ್ಯಾನ್ಸರ್‌ಗಳಲ್ಲಿ “ರೆನಲ್ ಸೆಲ್ ಕಾರ್ಸಿನೋಮಾ” ಅತ್ಯಂತ ಸಾಮಾನ್ಯವಾದ ವಿಧವಾಗಿದೆ.
ಇತ್ತೀಚಿನ ಹಲವು ವೈದ್ಯಕೀಯ ಅಧ್ಯಯನಗಳು ಬೊಜ್ಜು (ಸ್ಥೂಲಕಾಯತೆ) ಮೂತ್ರಪಿಂಡದ ಕ್ಯಾನ್ಸರ್‌ಗೆ ಕಾರಣವಾಗುವ ಪ್ರಮುಖ ಅಪಾಯಕಾರಕ ಅಂಶಗಳಲ್ಲಿ ಒಂದಾಗಿದೆ ಎಂದು ತಿಳಿಸಿವೆ. ಮುಖ್ಯವಾಗಿ, ಇದು ತಡೆಗಟ್ಟಬಹುದಾದ ಅಪಾಯಕಾರಕ ಅಂಶವಾಗಿರುವುದು ವಿಶೇಷವಾಗಿದೆ.
ದೇಹದಲ್ಲಿ ಅತಿಯಾದ ಕೊಬ್ಬು ಸಂಗ್ರಹವಾದಾಗ, ಇನ್ಸುಲಿನ್ ಮತ್ತು ಕೋಶಗಳ ಬೆಳವಣಿಗೆಗೆ ಸಹಾಯ ಮಾಡುವ ಕೆಲವು ಹಾರ್ಮೋನ್‌ಗಳ ಮಟ್ಟದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದರಿಂದ ಅಸಹಜ ಕೋಶಗಳ ಬೆಳವಣಿಗೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಜೊತೆಗೆ, ಬೊಜ್ಜು ಇರುವವರಲ್ಲಿ ದೇಹದೊಳಗೆ ನಿರಂತರವಾದ ಸಣ್ಣ ಪ್ರಮಾಣದ ಉರಿಯೂತ (ಇನ್‌ಫ್ಲಮೇಷನ್) ಕಂಡುಬರುತ್ತದೆ. ಇದು ಕ್ಯಾನ್ಸರ್ ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಬಹುದು.
ಇದನ್ನೂ ಓದಿ:
ಬೊಜ್ಜು ಅಧಿಕ ರಕ್ತದೊತ್ತಡ ಮತ್ತು ಟೈಪ್-2 ಮಧುಮೇಹದಂತಹ ಕಾಯಿಲೆಗಳಿಗೂ ಪ್ರಮುಖ ಕಾರಣವಾಗಿದೆ. ಈ ಎರಡೂ ಕಾಯಿಲೆಗಳು ಮೂತ್ರಪಿಂಡಗಳಿಗೆ ಹಾನಿ ಉಂಟುಮಾಡಿ, ಮೂತ್ರಪಿಂಡದ ಕ್ಯಾನ್ಸರ್ ಬರುವ ಅಪಾಯವನ್ನು ಇನ್ನಷ್ಟು ಹೆಚ್ಚಿಸಬಹುದು.
ತಜ್ಞರ ಪ್ರಕಾರ, ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದರಿಂದ ಮೂತ್ರಪಿಂಡದ ಕ್ಯಾನ್ಸರ್‌ನ ಅನೇಕ ಪ್ರಕರಣಗಳನ್ನು ತಡೆಗಟ್ಟಬಹುದು. ನಿಯಮಿತವಾಗಿ ವ್ಯಾಯಾಮ ಮಾಡುವುದು, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್‌ಯುಕ್ತ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಸಕ್ಕರೆ ಹೆಚ್ಚಿರುವ ಪಾನೀಯಗಳು, ಜಂಕ್ ಫುಡ್ ಹಾಗೂ ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡುವುದು ಸಹ ಅಗತ್ಯ.
ಬೊಜ್ಜು ಕೇವಲ ದೇಹದ ಆಕಾರಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ; ಇದು ಅನೇಕ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಆರೋಗ್ಯ ಸಮಸ್ಯೆಯಾಗಿದೆ ಎಂಬ ಅರಿವು ಸಮಾಜದಲ್ಲಿ ಮೂಡಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಮೂತ್ರಪಿಂಡದ ಕ್ಯಾನ್ಸರ್ ಮಾತ್ರವಲ್ಲದೆ ಹೃದಯರೋಗ, ಮಧುಮೇಹ ಮತ್ತು ಇತರ ದೀರ್ಘಕಾಲೀನ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡಬಹುದು.
ಇಂದೇ ಬೊಜ್ಜಿನ ವಿರುದ್ಧ ಕ್ರಮ ಕೈಗೊಳ್ಳುವುದು, ನಾಳೆಯ ಮೂತ್ರಪಿಂಡದ ಕ್ಯಾನ್ಸರ್‌ನ್ನು ತಡೆಗಟ್ಟುವ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸುವತ್ತ ಇಡುವ ಮಹತ್ವದ ಹೆಜ್ಜೆಯಾಗಿದೆ.
ಲೇಖಕರು:
ಡಾ. ಮಯೂರ್ ವಿ. ಪ್ರಭು
ವಿಭಾಗ ಮುಖ್ಯಸ್ಥರು ಹಾಗೂ ಸಲಹೆಗಾರರು, ನೆಫ್ರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು.



