ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಹಣದ ಪ್ರಮಾಣದಲ್ಲಿ ಹಠಾತ್ ಇಳಿಕೆ ಕಂಡಿದೆ! ಸ್ವಿಸ್ ನ್ಯಾಷನಲ್ ಬ್ಯಾಂಕ್ (SNB) ಬಿಡುಗಡೆ ಮಾಡಿರುವ 2025ರ ಅಂಕಿ ಅಂಶಗಳು ಇದನ್ನು ಸ್ಪಷ್ಟಪಡಿಸಿವೆ.
ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಒಟ್ಟು ಹಣ 3.25 ಬಿಲಿಯನ್ ಸ್ವಿಸ್ ಫ್ರಾಂಕ್ ಆಗಿದ್ದು, ಇದು ಭಾರತೀಯ ರೂಪಾಯಿಯಲ್ಲಿ ಸುಮಾರು 36,793 ಕೋಟಿ ಆಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮೊತ್ತದಲ್ಲಿ 8 ಶೇಕಡಕ್ಕೂ ಹೆಚ್ಚು ಇಳಿಕೆಯಾಗಿದೆ.
ಕಳೆದ ವರ್ಷ ಏರಿಕೆ, ಈ ವರ್ಷ ಇಳಿಕೆ!
ಕಳೆದ 2024ರ ಅಂತ್ಯದಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಒಟ್ಟು ಹಣ ಸುಮಾರು 3.5 ಬಿಲಿಯನ್ ಸ್ವಿಸ್ ಫ್ರಾಂಕ್ ಇತ್ತು. 2025ರಲ್ಲಿ ಈ ಚಿತ್ರಣ ಬದಲಾಗಿದೆ. ಆದರೆ ಇಲ್ಲಿ ಒಟ್ಟು ಹಣ ಕಡಿಮೆಯಾಗಿದ್ದರೂ, ವೈಯಕ್ತಿಕ ಮತ್ತು ಸಂಸ್ಥೆಗಳ ಗ್ರಾಹಕರ ಖಾತೆಗಳಲ್ಲಿ ಇರುವ ಠೇವಣಿಗಳು ಮಾತ್ರ 50 ಶೇಕಡಕ್ಕೂ ಹೆಚ್ಚು ಏರಿಕೆ ಕಂಡಿವೆ. 2024ರಲ್ಲಿ 346 ಮಿಲಿಯನ್ ಸ್ವಿಸ್ ಫ್ರಾಂಕ್ ಇದ್ದ ಈ ಮೊತ್ತ, 2025ರಲ್ಲಿ 524 ಮಿಲಿಯನ್ ಸ್ವಿಸ್ ಫ್ರಾಂಕ್‌ಗೆ ಏರಿಕೆಯಾಗಿದೆ. ಭಾರತೀಯ ರೂಪಾಯಿಯಲ್ಲಿ ಇದು ಸುಮಾರು 6,000 ಕೋಟಿ ರೂಪಾಯಿಗಳು. ವರದಿಯ ಪ್ರಕಾರ ಭಾರತೀಯರ ನೇರ ಖಾತೆಗಳಲ್ಲಿನ ಹಣ ಹೆಚ್ಚಾಗಿದೆ. ಆದರೆ ಇತರೆ ಹಣಕಾಸು ವ್ಯವಸ್ಥೆಗಳ ಮೂಲಕ ಇರಿಸಲಾಗಿದ್ದ ಮೊತ್ತ ಕಡಿಮೆಯಾಗಿದೆ.
ಹೆಚ್ಚಿನ ಹಣ ಎಲ್ಲಿದೆ?
SNB ಅಂಕಿ-ಅಂಶಗಳ ಪ್ರಕಾರ, ಸುಮಾರು 2.6 ಬಿಲಿಯನ್ ಸ್ವಿಸ್ ಫ್ರಾಂಕ್ ಹಣ ಇತರೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ ಇರಿಸಲಾಗಿದೆ. ಈ ವಿಭಾಗದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 15 ಶೇಕಡಾ ಇಳಿಕೆ ಕಂಡುಬಂದಿದೆ. ಇದೇ ಒಟ್ಟು ಪ್ರಮಾಣದಲ್ಲಿ ಕಡಿಮೆಯಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇತ್ತ ಟ್ರಸ್ಟ್‌ಗಳು ಮತ್ತು ಫಿಡ್ಯೂಷಿಯರಿ ವ್ಯವಸ್ಥೆಗಳ ಮೂಲಕ ಇರಿಸಲಾಗಿರುವ ಹಣದಲ್ಲಿ ಕೂಡಾ ಭಾರೀ ಇಳಿಕೆ ಕಂಡುಬಂದಿದೆ. 2025ರಲ್ಲಿ ಈ ವಿಭಾಗದಲ್ಲಿ ಕೇವಲ 18.6 ಮಿಲಿಯನ್ ಸ್ವಿಸ್ ಫ್ರಾಂಕ್ ಮಾತ್ರ ದಾಖಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಸುಮಾರು 55 ಶೇಕಡಾ ಕಡಿಮೆ. ಈ ಅಂಕಿ-ಅಂಶಗಳು ಕಪ್ಪು ಹಣದ ಲೆಕ್ಕವಲ್ಲ ಎಂದು ಸ್ವಿಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬ್ಯಾಂಕ್ ಫಾರ್ ಇಂಟರ್‌ನ್ಯಾಷನಲ್ ಸೆಟ್ಲ್‌ಮೆಂಟ್ಸ್ (BIS) ಬಿಡುಗಡೆ ಮಾಡಿದ ಮತ್ತೊಂದು ಅಂಕಿ-ಅಂಶದ ಪ್ರಕಾರ, ಭಾರತೀಯ ವ್ಯಕ್ತಿಗಳು ನೇರವಾಗಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿಗಳು 2025ರಲ್ಲಿ 20 ಶೇಕಡಾ ಏರಿಕೆ ಕಂಡಿವೆ. ಈ ಮೊತ್ತ 89.73 ಮಿಲಿಯನ್ ಅಮೆರಿಕನ್ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 780 ಕೋಟಿ ಆಗಿದೆ.



