ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ (Cross Voting) ಕುರಿತು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪಕ್ಷ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಮತ್ತು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಚ್ಚರಿಸಿದ್ದಾರೆ.
ಆಘಾತ ತಂದ ಪರಿಷತ್ ಚುನಾವಣಾ ಫಲಿತಾಂಶ
ಇತ್ತೀಚಿನ ಚುನಾವಣಾ ಫಲಿತಾಂಶ ಅತ್ಯಂತ ಆಘಾತಕಾರಿಯಾಗಿದೆ ಎಂದ ವಿಜಯೇಂದ್ರ, ಜೆಡಿಎಸ್‌ನಿಂದ ಆರೇಳು ಜನ ಹಾಗೂ ಬಿಜೆಪಿಯಿಂದ ನಾಲ್ಕೈದು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿಸಿದರು. ದುರಾದೃಷ್ಟವಶಾತ್ ಈ ಘಟನೆ ನಡೆದಿದ್ದು, ಮೈತ್ರಿ ಬೆನ್ನಿಗೆ ಇರಿದವರ ಸಂಪೂರ್ಣ ಮಾಹಿತಿ ಸದ್ಯದಲ್ಲೇ ಅಧಿಕೃತವಾಗಿ ಹೊರಬೀಳಲಿದೆ ಎಂದಿದ್ದಾರೆ.
ಕುಮಾರಸ್ವಾಮಿ ಅವರಿಗೆ ತೀವ್ರ ನೋವು
“ಈ ರಾಜಕೀಯ ದ್ರೋಹ ಮತ್ತು ಕ್ರಾಸ್ ವೋಟಿಂಗ್‌ನಿಂದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತೀವ್ರ ಬೇಸರ ಉಂಟಾಗಿದೆ. ನಮಗೂ ಅಷ್ಟೇ ನೋವಾಗಿದೆ. ನಾವಿಬ್ಬರೂ ಈ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ” ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.



