ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ನೆರೆರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನ ಅಧಿಕೃತ ಸ್ತಬ್ಧಚಿತ್ರಗಳು ಭಾಗವಹಿಸಿ ಹೊಸ ದಾಖಲೆ ಬರೆದಿವೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವದ ಕೊನೆಯ ದಿನವಾದ ಇಂದು ಜಂಬೂ ಸವಾರಿಯ ಭವ್ಯ ಮೆರವಣಿಗೆ ಆರಂಭವಾಗಿದ್ದು, ವಿವಿಧ ಜಿಲ್ಲೆಗಳು ಹಾಗೂ ಇಲಾಖೆಗಳ ಆಕರ್ಷಕ ಸ್ತಬ್ಧಚಿತ್ರಗಳು ಜನರ ಕಣ್ಮನ ಸೆಳೆಯುತ್ತಿವೆ.
ಇತಿಹಾಸ ಸೃಷ್ಟಿಸಿದ ನೆರೆರಾಜ್ಯಗಳ ಟ್ಯಾಬ್ಲೋ
ದಸರಾ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಅಧಿಕೃತವಾಗಿ ಸ್ತಬ್ಧಚಿತ್ರಗಳನ್ನು ಕಳುಹಿಸಿಕೊಟ್ಟಿವೆ. ಕೇರಳವು ತನ್ನ ಸಾಂಪ್ರದಾಯಿಕ ಕತಕ್ಕಳಿ ನೃತ್ಯ, ಜನಪದ ಕಲೆ ಹಾಗೂ ದೋಣಿ ಆಕಾರದ ಸ್ತಬ್ಧಚಿತ್ರದ ಮೂಲಕ ಶ್ರೀಮಂತ ಸಂಸ್ಕೃತಿಯನ್ನು ಅನಾವರಣಗೊಳಿಸಿದರೆ, ತಮಿಳುನಾಡು ತನ್ನ ಭವ್ಯ ವಾಸ್ತುಶಿಲ್ಪ ಹಾಗೂ ಸಾಹಸ ಕ್ರೀಡೆ ‘ಜಲ್ಲಿಕಟ್ಟು’ ಪ್ರದರ್ಶನದ ಮೂಲಕ ಗಮನ ಸೆಳೆದಿದೆ.
ಇಲಾಖೆಗಳು ಮತ್ತು ಸಂಸ್ಥೆಗಳ ಹೆಮ್ಮೆ
ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಗೆ 110 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ತಬ್ಧಚಿತ್ರ, ಸಮಾಜ ಕಲ್ಯಾಣ ಇಲಾಖೆಯ ಸಂವಿಧಾನ ಜಾಗೃತಿ ಟ್ಯಾಬ್ಲೋ ಮತ್ತು ಕ್ರೀಡಾ ಇಲಾಖೆಯ ಭಾರತ್ ಜೋಡೋ ಯಾತ್ರೆ ಮಾದರಿಯ ಪ್ರದರ್ಶನಗಳು ಗಮನ ಸೆಳೆದವು. ಕೆಎಸ್ಆರ್ಟಿಸಿ, ನಂದಿನಿ, ಮತ್ತು ಅನ್ನಭಾಗ್ಯ ಯೋಜನೆ ಒಳಗೊಂಡ ಆಹಾರ ಇಲಾಖೆಯ ಚಿತ್ರಗಳೂ ಇದರಲ್ಲಿವೆ.
ಜಿಲ್ಲೆಗಳ ಸಾಂಸ್ಕೃತಿಕ ಅನಾವರಣ
ಬೆಂಗಳೂರಿನ ಕರಗ ಉತ್ಸವ, ದಕ್ಷಿಣ ಕನ್ನಡದ ಯಕ್ಷಗಾನ, ಕಂಬಳ ಹಾಗೂ ಕೋರಗಜ್ಜ ಸಮುದಾಯ ಬಿಂಬಿಸುವ ಚಿತ್ರಗಳು, ಹಾಸನದ ಶಿಲ್ಪಕಲೆ, ಬೀದರ್ನ ಸಿಖ್ ಧರ್ಮದ ಇತಿಹಾಸ, ಬೆಳಗಾವಿಯ ಬೆಳವಾಡಿ ಮಲ್ಲಮ್ಮ ಮತ್ತು ಮೈಸೂರಿನ ಚಾಮುಂಡಿಬೆಟ್ಟದ ಪರಂಪರೆಯನ್ನು ಸ್ತಬ್ಧಚಿತ್ರಗಳ ಮೂಲಕ ಅದ್ಭುತವಾಗಿ ಪ್ರದರ್ಶಿಸಲಾಯಿತು.
ಇದನ್ನೂ ಓದಿ:
ಕೇಂದ್ರ ಮತ್ತು ರಕ್ಷಣಾ ಸಂಸ್ಥೆಗಳ ಭಾಗಿ
ಭಾರತೀಯ ವಾಯುಪಡೆ (IAF), ನೌಕಾಪಡೆ (Navy), ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಹಾಗೂ ಬಿಇಎಂಎಲ್ (BEML) ಸಂಸ್ಥೆಗಳು ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯಡಿ ದೇಶದ ರಕ್ಷಣಾ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿದವು.
ಮೆರವಣಿಗೆಯಲ್ಲಿ ಒಟ್ಟು 53ಕ್ಕೂ ಹೆಚ್ಚು ವಿಭಿನ್ನ ಜನಪದ ಕಲಾ ತಂಡಗಳು ಭಾಗವಹಿಸಿದ್ದು, ನಾಡಿನ ಕಲೆ, ಸಾಹಿತ್ಯ ಹಾಗೂ ಸರ್ಕಾರದ ಸಾಧನೆಗಳನ್ನು ಜಗತ್ತಿಗೆ ಸಾರುವಲ್ಲಿ ಮೈಸೂರು ದಸರಾ ಮತ್ತೊಮ್ಮೆ ಯಶಸ್ವಿಯಾಗಿದೆ.



