October 21, 2026
Wednesday, October 21, 2026
spot_img

ಮೈಸೂರು ಜಂಬೂ ಸವಾರಿ ವೈಭವ: ತಾಯಿ ಚಾಮುಂಡೇಶ್ವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಪುಷ್ಪಾರ್ಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವ್ಯ ಜಂಬೂ ಸವಾರಿ ಮೆರವಣಿಗೆಗೆ ಶುಭ ಮೀನ ಲಗ್ನದಲ್ಲಿ ಅತ್ಯಂತ ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಪ್ರಶಾಂತ ಆನೆಯು 750 ಕೆಜಿ ತೂಕದ ಭವ್ಯ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಐತಿಹಾಸಿಕ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಗಣ್ಯರಿಂದ ಪುಷ್ಪಾರ್ಚನೆ

 ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಂಸದ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ನಮಿಸಿದರು.

ಚಿನ್ನದ ಅಂಬಾರಿ ಹೊತ್ತ ಪ್ರಶಾಂತ

 ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಶಾಂತ ಆನೆಯು ಚಿನ್ನದ ಅಂಬಾರಿಯನ್ನು ಹೊತ್ತು ಮುನ್ನಡೆಯುತ್ತಿದ್ದಾನೆ. ಈ ಭವ್ಯ ನಡಿಗೆಗೆ ಕುಮ್ಕಿ ಆನೆಗಳಾದ ರೂಪಾ ಮತ್ತು ಕಾವೇರಿ ಜೊತೆಯಾಗಿ ಸಾಥ್ ನೀಡುತ್ತಿವೆ.

ಕಿಕ್ಕಿರಿದು ಸೇರಿದ ಜನ

ಅರಮನೆ ಆವರಣದಿಂದ ಆರಂಭವಾಗಿರುವ ಈ ಜಂಬೂ ಸವಾರಿ ಮೆರವಣಿಗೆಯು ಸುಮಾರು 5 ಕಿ.ಮೀ. ದೂರದಲ್ಲಿರುವ ಬನ್ನಿಮಂಟಪದವರೆಗೆ ಸಾಗಲಿದೆ. ಹಾದಿಯುದ್ದಕ್ಕೂ ನೆರೆದಿರುವ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಇದನ್ನೂ ಓದಿ:

ರಾಜ್ಯದ ವಿವಿಧ ಕಲೆ, ಸಂಸ್ಕೃತಿ ಹಾಗೂ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಮತ್ತು ಜಾನಪದ ಕಲಾತಂಡಗಳು ಮೆರವಣಿಗೆಯ ರಂಗನ್ನು ಮತ್ತಷ್ಟು ಹೆಚ್ಚಿಸಿವೆ.

Must Read