ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಬಲಪಡಿಸಲು ಮತ್ತು ಲಿಂಗ-ಸಂವೇದಿ ಪೊಲೀಸ್ ವ್ಯವಸ್ಥೆಯನ್ನು ಉತ್ತೇಜಿಸಲು ದೆಹಲಿ ಪೊಲೀಸ್ ಇಲಾಖೆ ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿದೆ. ಉತ್ತರ ದೆಹಲಿಯ ಸಬ್ಜಿ ಮಂಡಿ ಪೊಲೀಸ್ ಠಾಣೆಯ ಆವರಣದಲ್ಲಿ ದೆಹಲಿಯ ಮೊದಲ “ಸಂಪೂರ್ಣ ಮಹಿಳಾ ಪೊಲೀಸ್ ಠಾಣೆ” ಕಾರ್ಯಾರಂಭ ಮಾಡಿದೆ.
ಮಹಿಳೆಯರು ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ಬಂದು ದೂರು ನೀಡಲು ಸೂಕ್ತ ಮತ್ತು ಗೌರವಾನ್ವಿತ ವಾತಾವರಣ ನಿರ್ಮಿಸುವುದು ಈ ವಿಶೇಷ ಠಾಣೆಯ ಪ್ರಮುಖ ಉದ್ದೇಶವಾಗಿದೆ.
ಈ ಠಾಣೆ ಹೇಗೆ ಕೆಲಸ ಮಾಡುತ್ತದೆ?
ಈ ಪೊಲೀಸ್ ಠಾಣೆಯ ಮುಖ್ಯಸ್ಥರಾದ (SHO) ಹುದ್ದೆಯಿಂದ ಹಿಡಿದು ತನಿಖಾಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಯವರೆಗೆ ಎಲ್ಲರೂ ಮಹಿಳಾ ಪೊಲೀಸರೇ ಆಗಿರುತ್ತಾರೆ. ಈ ಹಿಂದೆ ಇದ್ದ ‘ಮಹಿಳಾ ದೌರ್ಜನ್ಯ ತಡೆ ಕೋಶಗಳು’ ಕೇವಲ ಕೌಟುಂಬಿಕ ವಿವಾದಗಳ ಸಂಧಾನಕ್ಕೆ ಸೀಮಿತವಾಗಿದ್ದವು ಮತ್ತು ನೇರವಾಗಿ FIR ದಾಖಲಿಸುವ ಅಧಿಕಾರ ಹೊಂದಿರಲಿಲ್ಲ. ಆದರೆ, ಈ ಹೊಸ ಮಹಿಳಾ ಪೊಲೀಸ್ ಠಾಣೆಯು ಸಾಮಾನ್ಯ ಠಾಣೆಯಂತೆಯೇ ಕಾರ್ಯನಿರ್ವಹಿಸಲಿದ್ದು, ತಾವೇ ನೇರವಾಗಿ ಅಪರಾಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಸಂಪೂರ್ಣ ಅಧಿಕಾರ ಹೊಂದಿದೆ.
ಈ ಪೊಲೀಸ್ ಠಾಣೆಯು ಇಡೀ ಉತ್ತರ ದೆಹಲಿ ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಳ್ಳಲಿದ್ದು, ಇಡೀ ಜಿಲ್ಲೆಯ ಪ್ರಮುಖ ಮಹಿಳಾ ಅಪರಾಧಗಳ ಪ್ರಕರಣಗಳನ್ನು ಇಲ್ಲಿಗೆ ವರ್ಗಾಯಿಸಲಾಗುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಲು ದಿನದ 24 ಗಂಟೆಯೂ ಕೆಲಸ ಮಾಡುವ ವಿಶೇಷ ಮಹಿಳಾ ತುರ್ತು ಸ್ಪಂದನಾ ತಂಡ ಇಲ್ಲ ಇರಲಿದೆ. ದಾಳಿಗಳು ಅಥವಾ ಕಠಿಣ ಕ್ಷೇತ್ರ ಕಾರ್ಯಾಚರಣೆಗಳ ಸಂದರ್ಭದಲ್ಲಿ ಬ್ಯಾಕಪ್ ಬೆಂಬಲ ನೀಡಲು ಮಾತ್ರ ಸೀಮಿತ ಸಂಖ್ಯೆಯ ಪುರುಷ ಪೊಲೀಸ್ ಸಿಬ್ಬಂದಿಯನ್ನು ಇವರ ಸಹಾಯಕ್ಕೆ ನಿಯೋಜಿಸಲಾಗಿರುತ್ತದೆ.
ಯಾವ ಪ್ರಕರಣಗಳ ತನಿಖೆ ಇಲ್ಲಿ ನಡೆಯುತ್ತದೆ?
ಮಹಿಳೆಯರು ಮತ್ತು ಮಕ್ಕಳ ಮೇಲಿನ ಗಂಭೀರ ಅಪರಾಧಗಳ ತಡೆ ಮತ್ತು ತನಿಖೆಯ ಮೇಲೆ ಈ ಠಾಣೆ ಪ್ರಮುಖ ಗಮನ ಹರಿಸುತ್ತದೆ:
ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು, ಕೌಟುಂಬಿಕ ಹಿಂಸಾಚಾರ ಮತ್ತು ವರದಕ್ಷಿಣೆ ಕಿರುಕುಳ, ಪೋಕ್ಸೋ (POCSO) ಕಾಯ್ದೆಯಡಿ ದಾಖಲಾಗುವ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು,ಅಡ್ಡಗಟ್ಟುವುದು (Stalking) ಮತ್ತು ಆನ್‌ಲೈನ್/ಆಫ್‌ಲೈನ್ ಕಿರುಕುಳಗಳ ಕುರಿತು ತನಿಖೆ ನಡೆಸುತ್ತದೆ.
ಇದನ್ನೂ ಓದಿ:
ಕೌನ್ಸೆಲಿಂಗ್ ಮತ್ತು ಕಾನೂನು ನೆರವು
ಕೇವಲ ಅಪರಾಧ ತನಿಖೆಯಷ್ಟೇ ಅಲ್ಲದೆ, ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುವುದು, ಸಂತ್ರಸ್ತರಿಗೆ ಮಾನಸಿಕ ಕೌನ್ಸೆಲಿಂಗ್ ಒದಗಿಸುವುದು ಮತ್ತು ಮಹಿಳಾ ಹಕ್ಕುಗಳ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಔಟ್‌ರೀಚ್ ಕಾರ್ಯಕ್ರಮಗಳನ್ನು ಈ ಠಾಣೆ ಹಮ್ಮಿಕೊಳ್ಳಲಿದೆ.
ಪ್ರಾಯೋಗಿಕವಾಗಿ ಉತ್ತರ ದೆಹಲಿಯಲ್ಲಿ ಆರಂಭಿಸಲಾಗಿರುವ ಈ ಮಾದರಿಯನ್ನು, ಮುಂದಿನ ಹಂತದಲ್ಲಿ ದೆಹಲಿಯ ಎಲ್ಲಾ 15 ಜಿಲ್ಲೆಗಳಿಗೂ ವಿಸ್ತರಿಸಲು ದೆಹಲಿ ಪೊಲೀಸ್ ಇಲಾಖೆ ಯೋಜಿಸಿದೆ.



