ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ತಿರುವಣ್ಣಾಮಲೈನ ಶ್ರೀ ಅರುಣಾಚಲೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಿತ ತಿರುಕಾರ್ತಿಗೈ ದೀಪಂ ಆಚರಣೆಗಳು ಆರಂಭವಾಗಿವೆ. ದೇವಾಲಯದ ಆವರಣದಲ್ಲಿ ಸಾಂಪ್ರದಾಯಿಕ ಧ್ವಜಾರೋಹಣ ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆಯನ್ನು ನೀಡಲಾಗಿದ್ದು, ವಿನಾಯಕ ಮತ್ತು ಚಂಡಿಕೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಬೆಳ್ಳಿ ವಾಹನಗಳಲ್ಲಿ ಕುಳ್ಳಿರಿಸಿ ದೇವಾಲಯದ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.
ಹತ್ತು ದಿನಗಳ ಈ ಸುದೀರ್ಘ ಉತ್ಸವದ ಪ್ರಮುಖ ಆಕರ್ಷಣೆ ಮತ್ತು ಅಂತಿಮ ದಿನವಾದ ನವೆಂಬರ್ 24 ಅತ್ಯಂತ ವಿಶೇಷವಾಗಿದೆ. ಅಂದು ಮುಂಜಾನೆ 4 ಗಂಟೆ ಸುಮಾರಿಗೆ ದೇವಾಲಯದ ಗರ್ಭಗುಡಿಯಲ್ಲಿ ‘ಭರಣಿ ದೀಪ’ವನ್ನು ಬೆಳಗಿಸಲಾಗುತ್ತದೆ. ತದನಂತರ, ಸಂಜೆ ಸರಿಯಾಗಿ 6 ಗಂಟೆಗೆ 2,668 ಅಡಿ ಎತ್ತರದ ಪವಿತ್ರ ಅರುಣಾಚಲ ಬೆಟ್ಟದ ತುದಿಯಲ್ಲಿ ‘ಮಹಾ ದೀಪ’ವನ್ನು ಬೆಳಗಿಸಲಾಗುತ್ತದೆ. ಬೆಟ್ಟದ ತುದಿಯಲ್ಲಿ ಬೆಳಗುವ ಈ ಮಹಾ ಜ್ಯೋತಿಯನ್ನು ದರ್ಶಿಸುವುದರಿಂದ ಸಕಲ ಪಾಪಗಳು ಕಳೆದು ಶುಭವಾಗುತ್ತದೆ ಎಂಬ ನಂಬಿಕೆಯಿದೆ. ಮಹಾ ದೀಪ ಬೆಳಗುತ್ತಿದ್ದಂತೆಯೇ ಇಡೀ ತಿರುವಣ್ಣಾಮಲೈ ಕ್ಷೇತ್ರವು ಆಧ್ಯಾತ್ಮಿಕ ಕಳೆಯಿಂದ ಕಂಗೊಳಿಸಲಿದೆ.
ಈ ಬಾರಿಯೂ ಮಹಾ ದೀಪೋತ್ಸವದ ದಿನದಂದು ಅರುಣಾಚಲ ಬೆಟ್ಟವನ್ನು ಹತ್ತಲು ಭಕ್ತರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ದೀಪ ಬೆಳಗಿಸುವ ನವೆಂಬರ್ 24 ರಂದು ಯಾವುದೇ ಭಕ್ತರಿಗೆ ಬೆಟ್ಟದ ಮೇಲೆ ತೆರಳಲು ಅನುಮತಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ವಂದನಾ ಗರ್ಗ್ ಅಧಿಕೃತವಾಗಿ ಘೋಷಿಸಿದ್ದಾರೆ.



