ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದ್ರೋಹಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಾವು ತುಂಬಾ ಸೀಕ್ರೆಟ್ ಆಗಿ ವೋಟ್ ಮಾಡಿದ್ದೇವೆ, ಯಾರಿಗೆ ಗೊತ್ತು ಎಂದು ಅಡ್ಡಮತದಾನ ಮಾಡಿದವರು ಅಂದುಕೊಂಡಿದ್ದಾರೆ. ಆದರೆ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಗುಡುಗಿದ್ದಾರೆ.
ಪಕ್ಷದ ಶಾಸಕರ ವರ್ತನೆಗೆ ಜೋಶಿ ಗರಂ
ಇತ್ತೀಚೆಗೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಒಟ್ಟು 11 ಶಾಸಕರು ಅಡ್ಡಮತದಾನ ಮಾಡಿರುವುದು ಬಹಿರಂಗಗೊಂಡ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಷ್ಟ್ರೀಯ ನಾಯಕತ್ವ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಯಾರು ಯಾರಿಗೆ ಮತ ಹಾಕಿದ್ದಾರೆ ಮತ್ತು ಯಾರ್ಯಾರು ವಿಶ್ವಾಸದ್ರೋಹ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಹೈಕಮಾಂಡ್‌ನಿಂದ ತನಿಖಾ ಸಮಿತಿ ರಚನೆ
ಅಡ್ಡಮತದಾನದ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಕ್ಷಣವೇ ಮೂವರು ಹಿರಿಯ ನಾಯಕರನ್ನು ಒಳಗೊಂಡ ಸತ್ಯಶೋಧನಾ ತನಿಖಾ ಸಮಿತಿ ರಚಿಸಿದ್ದಾರೆ. ಸಿ.ಟಿ. ರವಿ, ಎನ್. ಮಹೇಶ್ ಮತ್ತು ಮಹೇಶ್ ಟೆಂಗಿನಕಾಯಿ. ಈ ಸಮಿತಿಯು ಮತದಾನದ ಮಾದರಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಜೂನ್ 25 ರೊಳಗೆ ಹೈಕಮಾಂಡ್‌ಗೆ ಸಮಗ್ರ ವರದಿ ನೀಡುವಂತೆ ಆದೇಶಿಸಲಾಗಿದೆ.
ಇದನ್ನೂ ಓದಿ:
ದೆಹಲಿಗೆ ರಾಜ್ಯ ನಾಯಕರಿಗೆ ಬುಲಾವ್!
ಈ ಭಿನ್ನಮತ ಮತ್ತು ಮುಜುಗರದ ಬೆಳವಣಿಗೆಯಿಂದ ಬಿಜೆಪಿ ಕೇಂದ್ರ ನಾಯಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಹೀಗಾಗಿ, ಈ ಕುರಿತು ವಿಸ್ತೃತ ಚರ್ಚೆ ನಡೆಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್‌ಗೆ ಜೂನ್ 23 ರಂದು ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ.
ಯಾರೆಷ್ಟೇ ಗೌಪ್ಯವಾಗಿ ಮತದಾನ ಮಾಡಿದ್ದೇವೆ ಎಂದು ಬೀಗುತ್ತಿದ್ದರೂ, ಅವರ ಮುಖವಾಡ ಕಳಚುವುದು ನಿಶ್ಚಿತ ಮತ್ತು ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವುದು ಶತಸ್ಸಿದ್ಧ ಎಂದು ಜೋಶಿ ತಿಳಿಸಿದ್ದಾರೆ.



