July 16, 2026
Thursday, July 16, 2026
spot_img

ಸುಳ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಕೆರೆಯಲ್ಲಿ ಮುಳುಗಿ ಪುಟಾಣಿಗಳಿಬ್ಬರ ದಾರುಣ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರದಲ್ಲಿ ಎಂಬಲ್ಲಿ ಶನಿವಾರ ಸಂಜೆ ಅವಳಿ ಜವಳಿ ಪುಟಾಣಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ದಾರುಣ ಘಟನೆ ಇಡೀ ಪ್ರದೇಶವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.

ಮೃತ ಮಕ್ಕಳನ್ನು ವಸಂತ-ದಿವ್ಯ ದಂಪತಿಯ ಪುತ್ರರಾದ ಯಸ್ವಿನ್ ಮತ್ತು ಜಸ್ವಿನ್ (5) ಎಂದು ಗುರುತಿಸಲಾಗಿದೆ.

ಪೋಷಕರು ಕೆಲಸಕ್ಕೆ ತೆರಳಿದ್ದ ವೇಳೆ ಶಾಲೆಯಿಂದ ಮನೆಗೆ ಮರಳಿದ್ದ ಈ ಮಕ್ಕಳು, ಸಂಜೆ ವೇಳೆಯಲ್ಲಿ ಆಟವಾಡುತ್ತಾ ಕೆರೆಯ ಸಮೀಪಕ್ಕೆ ತೆರಳಿದ್ದು, ಈ ವೇಳೆ ಆಕಸ್ಮಿಕವಾಗಿ ಇಬ್ಬರೂ ಕೆರೆಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸಂಜೆ 5.30ರಿಂದ 5.45ರ ನಡುವಿನ ಅವಧಿಯಲ್ಲಿ ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:

ಮಕ್ಕಳು ಕಾಣಿಸದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಸುಮಾರು 7.45ರ ವೇಳೆಗೆ ಇಬ್ಬರು ಮಕ್ಕಳ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಒಂದೇ ಮನೆಯಲ್ಲಿ ಹುಟ್ಟಿ, ಒಂದೇ ಶಾಲೆಗೆ ಹೋಗುತ್ತಿದ್ದ ಅವಳಿ ಮಕ್ಕಳ ಅಕಾಲಿಕ ಸಾವಿನಿಂದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲೂ ದುಃಖದ ವಾತಾವರಣ ಆವರಿಸಿದ್ದು, ಸ್ಥಳೀಯರು ಕಂಬನಿ ಮಿಡಿದಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !