ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮುಂಗಾರು ಮಳೆ ಕೊನೆಗೂ ಚುರುಕಾಗಿದ್ದು, ಕೃಷಿಕರು ಹಾಗೂ ಸಾರ್ವಜನಿಕರಿಗೆ ಮಳೆರಾಯ ಭರ್ಜರಿ ಸಿಹಿ ಸುದ್ದಿ ನೀಡಿದ್ದಾನೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಲವಾದ ಗಾಳಿ ಮತ್ತು ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಮುಂದಿನ 3 ಗಂಟೆಗಳ ಕಾಲ ಈ ಜಿಲ್ಲೆಗಳಲ್ಲಿ ವರುಣನ ಅಬ್ಬರ ಮತ್ತಷ್ಟು ಜೋರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಭಾರೀ ಮಳೆ?
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಮುಂದಿನ ಮೂರು ಗಂಟೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ರೈತರಲ್ಲಿ ಮೂಡಿದ ಹರ್ಷ
ಇದನ್ನೂ ಓದಿ:
ಕಳೆದ ಕೆಲವು ದಿನಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಈ ಮಳೆ ಸಂಜೀವಿನಿಯಾಗಿದೆ. ಬಿತ್ತನೆ ಕಾರ್ಯ ಚುರುಕುಗೊಳಿಸಲು ಮತ್ತು ಒಣಗುತ್ತಿದ್ದ ಬೆಳೆಗಳನ್ನು ಉಳಿಸಿಕೊಳ್ಳಲು ಈ ವರುಣನ ಕೃಪೆ ಸಹಕಾರಿಯಾಗಿದೆ. ಜಲಾಶಯಗಳ ಒಳಹರಿವು ಕೂಡ ಹೆಚ್ಚಾಗುವ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ಶುರುವಾದ ಮಳೆ
ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ ವರುಣನ ಆರ್ಭಟ ಮತ್ತೆ ಜೋರಾಗಿದ್ದು, ಮುಂದಿನ 3 ಗಂಟೆಗಳ ಕಾಲ ನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ನಗರದ ಕೇಂದ್ರ ಭಾಗಗಳಾದ ಮೆಜೆಸ್ಟಿಕ್, ಕಾರ್ಪೊರೇಷನ್, ಎಂ.ಜಿ. ರಸ್ತೆ, ಶಿವಾಜಿನಗರ ಮಾತ್ರವಲ್ಲದೆ ಪೂರ್ವ ಮತ್ತು ದಕ್ಷಿಣ ಬೆಂಗಳೂರಿನ ಪ್ರಮುಖ ಐಟಿ ಹಬ್‌ಗಳಾದ ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆ, ಜಯನಗರ, ಜೆ.ಪಿ. ನಗರ ಮತ್ತು ಯಶವಂತಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಹನಿ ಹನಿಯಾಗಿ ಆರಂಭವಾದ ಮಳೆ ಇದೀಗ ಜೋರಾಗಿದೆ.



