June 22, 2026
Monday, June 22, 2026
spot_img

ಕಾರ್ಯಕ್ರಮವೊಂದರಲ್ಲಿ ರಮೇಶ್ ಜಾರಕಿಹೊಳಿ–ರಮೇಶ್ ಕತ್ತಿ ಮುಖಾಮುಖಿ: ಹಗ್‌ನಿಂದ ಶುರುವಾಯ್ತು ಚರ್ಚೆ

ಹೊಸದಿಗಂತ ವರದಿ ಬೆಳಗಾವಿ :

ಜಿಲ್ಲೆಯ ರಾಜಕೀಯದಲ್ಲಿ ಪರಸ್ಪರ ಪೈಪೋಟಿಯಿಂದ ಗುರುತಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ರಮೇಶ್ ಕತ್ತಿ ಅವರು ಭಾನುವಾರ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿದ್ದು, ಇಬ್ಬರೂ ಪರಸ್ಪರ ಅಪ್ಪಿಕೊಂಡು ಆತ್ಮೀಯವಾಗಿ ಮಾತುಕತೆ ನಡೆಸಿದ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹುಕ್ಕೇರಿ ಕೆಇಬಿ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಗಳ ಸಂದರ್ಭದಲ್ಲಿ ಜಾರಕಿಹೊಳಿ ಮತ್ತು ಕತ್ತಿ ಬಣಗಳ ನಡುವೆ ತೀವ್ರ ರಾಜಕೀಯ ಹೋರಾಟ ನಡೆದಿತ್ತು. ಈ ಪೈಪೋಟಿ ಹಲವು ವರ್ಷಗಳಿಂದ ಮುಂದುವರಿದಿದ್ದು, ಹುಕ್ಕೇರಿ ಭಾಗದಲ್ಲಿ ಇಂದಿಗೂ ಎರಡು ಕುಟುಂಬಗಳ ನಡುವಿನ ರಾಜಕೀಯ ಸಂಘರ್ಷ ಸಂಪೂರ್ಣವಾಗಿ ಶಮನಗೊಂಡಿಲ್ಲ.

ಇಂತಹ ರಾಜಕೀಯ ಹಿನ್ನೆಲೆಯ ನಡುವೆಯೇ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ರಮೇಶ್ ಕತ್ತಿ ಪರಸ್ಪರ ಅಪ್ಪಿಕೊಂಡು ಸ್ನೇಹಪೂರ್ವಕವಾಗಿ ಮಾತನಾಡಿರುವುದು ಹಲವು ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಇಬ್ಬರು ನಾಯಕರು ಪ್ರದರ್ಶಿಸಿದ ಆತ್ಮೀಯತೆ ರಾಜಕೀಯ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.

ಡಿಸಿಸಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರೆ, ರಮೇಶ್ ಜಾರಕಿಹೊಳಿ ಮೌನ ವಹಿಸಿದ್ದರು. ಆದರೆ ಇದೀಗ ರಮೇಶ್ ಜಾರಕಿಹೊಳಿ ಮತ್ತು ರಮೇಶ್ ಕತ್ತಿ ನಡುವಿನ ಈ ಆತ್ಮೀಯ ಭೇಟಿ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !