August 6, 2026
Thursday, August 6, 2026
spot_img

ಅನ್ನದಾತರ ರಕ್ಷಣೆಯೇ ಸರ್ಕಾರದ ಮೊದಲ ಆದ್ಯತೆ: ತುಂಗಭದ್ರಾ ನೀರು ಬಿಡುಗಡೆ ಕುರಿತು ಸಚಿವ ಬಿ.ನಾಗೇಂದ್ರ ಸ್ಪಷ್ಟನೆ

ಹೊಸದಿಗಂತ ವರದಿ ಬಳ್ಳಾರಿ:

ತುಂಗಭದ್ರಾ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಶೀಘ್ರದಲ್ಲೇ ನೀರು ಹರಿಸಲಾಗುವುದು, ರೈತರಲ್ಲಿ ಯಾವುದೇ ಆತಂಕ ಬೇಡ, ಅನ್ನದಾತರ ರಕ್ಷಣೆಯೇ ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

ತಾಲೂಕಿನ ಚಳಗುರ್ಕಿ ಗ್ರಾಮದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಯನ್ನು ಅರಿತಿದ್ದೇನೆ, ಅನ್ನದಾತರು ಸುಖಕರವಾಗಿದ್ದಾರೆ ನಾಡು ಸುಭಿಕ್ಷೆಯಾಗಿರಲಿದೆ. ಬರ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡುವೆ. ಬರುವ ದಿನಗಳಲ್ಲಿ ವರುಣ ಕೃಪೆ ತೋರುವ ವಿಶ್ವಾಸವಿದೆ. ಒಂದು ಬೆಳೆಗೆ ಖಂಡಿತ ನೀರು ಬಿಡಲಾಗುವುದು. ಮತ್ತೆ ಮಳೆಯಾದರೆ ಎರಡನೇ ಬೆಳೆಗೂ ಕಾಲುವೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.

ಇಂದು ಹಾಗೂ ನಾಳೆ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಬಿಜೆಪಿಯವರು ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಲು ಒತ್ತಾಯಿಸುತ್ತಿದ್ದು, ಇದನ್ನು ನಮ್ಮ ಸರ್ಕಾರ ಮಾಡಲಿದೆ. ಮೊದಲು ಕಳೆದ ವರ್ಷದ ಕೇಂದ್ರ ಸರ್ಕಾರ ನೀಡಬೇಕಾದ ಪರಿಹಾರವನ್ನು ಕೊಡಿಸುವ ಕೆಲಸ ಬಿಜೆಪಿ ಅವರು ಮಾಡಲಿ, ನಾವು ನಮ್ಮ ರಾಜ್ಯದ ರೈತರೊಂದಿಗೆ ಇದ್ದೇವೆ, ಅವರ ಕಷ್ಟ, ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ, ಇದರಲ್ಲಿ ಅನುಮಾನವೇ ಬೇಡ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರದ ಅವಧಿ 22 ತಿಂಗಳು ಇದೆ, ಸಿಎಂ ಡಿ.ಕೆ.ಶಿವಕುಮಾರ್ ಅವರ ಆಶಯದಂತೆ 44 ತಿಂಗಳಲ್ಲಿ ಆಗಬೇಕಾದ ಅಭಿವೃದ್ದಿ ಕೆಲಸಗಳನ್ನು 24*7 ಎಂಬಂತೆ ಕೆಲಸ ಮಾಡಲಿದ್ದೇವೆ, ಮತ್ತೆ ನಮ್ಮ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಲಿದೆ ಎಂದರು.

ಇದನ್ನೂ ಓದಿ:

ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಲೀಡಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಬುಡಾ ಮಾಜಿ ಅಧ್ಯಕ್ಷ ಜೆ.ಎಸ್.ಆಂಜನೇಯಲೂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀನಳ್ಳಿ ಚಂದ್ರಶೇಖರ್, ಬಗರ್ ಹುಕುo ಸಾಗುವಳಿ ಅಧ್ಯಕ್ಷ ಆರ್.ತಿಮ್ಮನಗೌಡ, ಸಿದ್ದಮ್ಮನಹಳ್ಳಿ ತಿಮ್ಮನಗೌಡ, ಬಿಡಿ ಹಳ್ಳಿ ಸತ್ಯನಾರಾಯಣ ರೆಡ್ಡಿ, ಕೆ.ತಿಮ್ಮರಾಜು, ವಿಷ್ಣುವರ್ಧನ್ ಬೋಯಪಾಟಿ, ವೆಂಕಟೇಶ್ ಪ್ರಸಾದ್ ಸೇರಿದಂತೆ ಇತರರಿದ್ದರು. ಇದಕ್ಕೂ ಮುನ್ನ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಚಿವರು, ಅಧಿಕಾರಿಗಳೊಂದಿಗೆ ಬರ ಅಧ್ಯಯನ ನಡೆಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !