June 25, 2026
Thursday, June 25, 2026
spot_img

ನಮಗೂ ನಷ್ಟ ಆಗ್ತಿದೆ! ಬೆಲೆ ಏರಿಕೆ ಬಿಸಿ ಮುಟ್ಟಿಸೋಕೆ ರೆಡಿಯಾದ ಕೆಎಸ್‌ಆರ್‌ಟಿಸಿ& ಬಿಎಂಟಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಜನತೆಗೆ ಶೀಘ್ರವೇ ಬಸ್‌ ಟಿಕೆಟ್‌ ದರದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಸಾರಿಗೆ ಸಂಸ್ಥೆಗಳು ಬೆಲೆ ಏರಿಕೆಗೆ ಸಜ್ಜಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಟಿಕೆಟ್ ದರದಲ್ಲಿ ಬರೋಬ್ಬರಿ 44% ರಷ್ಟು ಏರಿಕೆ ಮಾಡಲು ಪ್ರಸ್ತಾಪಿಸಿದೆ.

ಆರ್ಥಿಕ ನಷ್ಟ, ಡಿಸೇಲ್‌ ದರ ಏರಿಕೆಯಿಂದ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ತತ್ತರಿಸಿದ್ದು, ಭಾರೀ ಪ್ರಮಾಣದಲ್ಲಿ ಟಿಕೆಟ್‌ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿವೆ. ಒಟ್ಟಾರೆ ನಾಲ್ಕು ನಿಗಮಗಳು ತಮ್ಮದೇ ಆದ ದರ ಪರಿಷ್ಕರಣೆಗೆ ಬೇಡಿಕೆ ಇಟ್ಟಿವೆ. ಬಿಎಂಟಿಸಿ ದರದಲ್ಲಿ ಶೇ.44% ರಷ್ಟು ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದರೆ ಕೆಎಸ್‌ಆರ್‌ಟಿಸಿ ಟಿಕೆಟ್ ದರವನ್ನು 33% ರಷ್ಟು ಹೆಚ್ಚಿಸಲು ಅನುಮತಿ ಕೋರಿದೆ.

ಮೇ 25 ರವರೆಗಿನ ಇಂಧನ ದರ ಏರಿಕೆಯು ನಿಗಮಗಳ ಸೊರಗುವಿಕೆಗೆ ಪ್ರಮುಖ ಕಾರಣವಾಗಿದೆ. ಕೇವಲ ಹತ್ತು ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ಡೀಸೆಲ್ ದರ ಏರಿಕೆಯಾಗಿದೆ. ಇದರಿಂದಾಗಿ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ 7.81 ರೂ. ಏರಿಕೆ ಕಂಡಿತ್ತು.ಪ್ರತಿ ನಿತ್ಯ ನಾಲ್ಕೂ ನಿಗಮಗಳ ಬಸ್‌ಗಳಿಗೆ 13 ಲಕ್ಷ ಲೀಟರ್‌ಗೂ ಹೆಚ್ಚು ಡೀಸೆಲ್ ಬಳಕೆಯಾಗುತ್ತಿದೆ. ಈ ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ತಿಂಗಳಿಗೆ 40 ಕೋಟಿ ರೂ. ಹಾಗೂ ವರ್ಷಕ್ಕೆ ಬರೋಬ್ಬರಿ 480 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಇದರ ಜೊತೆಗೆ ಶಕ್ತಿ ಗ್ಯಾರಂಟಿ ಕೂಡ ಇದ್ದು, ಹೆಣ್ಣುಮಕ್ಕಳು ಫ್ರೀಯಾಗಿ ಓಡಾಟ ನಡೆಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ದರ ಏರಿಕೆ ಅನಿವಾರ್ಯ ಎಂದು ನಿಗಮಗಳು ಹೇಳುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !