June 22, 2026
Monday, June 22, 2026
spot_img

ಶ್ರೀಮಂತರೇ ಈಕೆಯ ಟಾರ್ಗೆಟ್: ಸೋಶಿಯಲ್ ಮೀಡಿಯಾದಲ್ಲಿ ಸ್ನೇಹದ ನಾಟಕವಾಡಿ ಲಕ್ಷ ಲಕ್ಷ ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾ ಬಂಧನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಹೈಫೈ ವಂಚಕಿಯೊಬ್ಬಳ ಕಿಲಾಡಿ ಆಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀಮಂತರನ್ನು ಸಂಪರ್ಕಿಸಿ, ತಾನು ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದ ನಟಿ ವನಿತಾಳನ್ನು ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಇಂದು (ಜೂನ್ 22) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಂಚನೆಯ ರೋಚಕ ಹಿನ್ನೆಲೆ:

ಬಂಧಿತ ಆರೋಪಿ ವನಿತಾ ಅತ್ಯಂತ ಚಾಲಾಕಿ ಹಾಗೂ ವ್ಯವಸ್ಥಿತವಾಗಿ ವಂಚನೆ ಜಾಲ ಹೆಣೆಯುತ್ತಿದ್ದಳು. ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ತಾನು ಪ್ರಸಿದ್ಧ ಕಿರುತೆರೆ ನಟಿ ಎಂದು ಬಿಂಬಿಸಿಕೊಳ್ಳುತ್ತಿದ್ದಳು. ಆನ್‌ಲೈನ್‌ನಲ್ಲಿ ಹಾಯ್, ಹಲೋ ಎನ್ನುತ್ತಾ ಕೇವಲ ಪ್ರೊಫೈಲ್ ನೋಡಿ ಶ್ರೀಮಂತ ಪುರುಷರನ್ನೇ ಟಾರ್ಗೆಟ್ ಮಾಡಿ ಸ್ನೇಹ ಬೆಳೆಸುತ್ತಿದ್ದಳು. ನಿರಂತರವಾಗಿ ಮಾತನಾಡಿ ಎದುರಿದ್ದವರ ನಂಬಿಕೆ ಗಳಿಸುವುದು ಈಕೆಯ ಮೊದಲ ತಂತ್ರವಾಗಿತ್ತು.

ಆಭರಣ ಬಿಡಿಸುವ ಸುಳ್ಳು ಕಥೆ:

ಪೂರ್ಣ ನಂಬಿಕೆ ಬಂದ ಬಳಿಕ ತನ್ನ ಅಸಲಿ ಮುಖವಾಡ ಕಳಚುತ್ತಿದ್ದಳು. “ನಾನು ಸದ್ಯ ತೀವ್ರ ಕಷ್ಟದಲ್ಲಿದ್ದೇನೆ. ನನ್ನ ಚಿನ್ನದ ಆಭರಣಗಳನ್ನು ಹಣಕಾಸು ಸಂಸ್ಥೆಯಲ್ಲಿ ಅಡವಿಟ್ಟಿದ್ದೇನೆ. ಅದನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣದ ಅವಶ್ಯಕತೆಯಿದೆ. ಕೇವಲ ಎರಡರಿಂದ ಮೂರು ದಿನಗಳಲ್ಲಿ ಸಾಲದ ರೂಪದಲ್ಲಿ ಪಡೆದ ಹಣವನ್ನು ವಾಪಸ್ ನೀಡುತ್ತೇನೆ” ಎಂದು ಕಣ್ಣೀರಿಟ್ಟು ನಂಬಿಸುತ್ತಿದ್ದಳು. ನಟಿಯ ಮಾತನ್ನು ನಿಜವೆಂದು ನಂಬಿ ನೂರಾರು ಜನ ಲಕ್ಷಾಂತರ ರೂಪಾಯಿಗಳನ್ನು ನೀಡುತ್ತಿದ್ದರು.

ಸಿಸಿಟಿವಿ ಇಲ್ಲದ ಜಾಗ ನೋಡಿ ಕ್ಯಾಶ್ ಪಡೆಯುತ್ತಿದ್ದಳು!

ಬಹಳ ಜಾಣತನದಿಂದ ವರ್ತಿಸುತ್ತಿದ್ದ ವನಿತಾ, ಆನ್‌ಲೈನ್ ಯುಪಿಐ (UPI) ವರ್ಗಾವಣೆ ಮೂಲಕ ಹಣ ಪಡೆಯುತ್ತಿರಲಿಲ್ಲ. ಬದಲಿಗೆ ತಾನು ಹೇಳಿದ ಜಾಗಕ್ಕೆ ನಗದು ) ಹಣ ತರುವಂತೆ ಪೀಡಿಸುತ್ತಿದ್ದಳು. ಪೊಲೀಸರಿಗೆ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ನಗರದ ಯಾವ ಭಾಗದಲ್ಲಿ ಸಿಸಿಟಿವಿ (CCTV) ಕ್ಯಾಮೆರಾಗಳು ಇಲ್ಲವೋ, ಅಂತಹ ನಿರ್ಜನ ಪ್ರದೇಶಗಳನ್ನು ಹುಡುಕಿ ಅಲ್ಲಿಗೆ ಹಣ ನೀಡುವವರನ್ನು ಕರೆಸಿಕೊಳ್ಳುತ್ತಿದ್ದಳು. ಒಮ್ಮೆ ಕೈಗೆ ನಗದು ಹಣ ಸಿಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೆ ಪರಾರಿಯಾಗುತ್ತಿದ್ದಳು.

ಇದನ್ನೂ ಓದಿ:

ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ:

ನಟಿಯ ಈ ಕಿಲಾಡಿ ಆಟದಿಂದ ತುತ್ತಾದ ಸಂತ್ರಸ್ತ ಯುವಕರೊಬ್ಬರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ನೇತೃತ್ವದ ತಂಡ, ತಾಂತ್ರಿಕ ವಿಸ್ತರಣೆ ಹಾಗೂ ಮೊಬೈಲ್ ಲೊಕೇಶನ್ ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ನಟಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈಕೆಯಿಂದ ಇನ್ನು ಎಷ್ಟು ಜನರು ವಂಚನೆಗೆ ಒಳಗಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !