ಆರೋಗ್ಯಕ್ಕೆ ಪಾಲಕ್ ಸೊಪ್ಪು ತುಂಬಾ ಒಳ್ಳೆಯದು. ಆದರೆ ದಿನಾ ಪಲ್ಯ, ಸಾಂಬಾರ್ ತಿಂದು ಬೇಜಾರಾಗಿದ್ದರೆ, ಪಾಲಕ್ ಸೂಪ್ ಮಾಡಬಹುದು. ಇದರಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್‌ಗಳು ಹೆಚ್ಚಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ರಾತ್ರಿ ಊಟದ ಬದಲು ಈ ಲಘು ಸೂಪ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗಿ, ತೂಕ ಇಳಿಸಲು ಹಾಗೂ ರಕ್ತಹೀನತೆ ನಿವಾರಣೆಗೆ ಸಹಾಯ ಮಾಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಪಾಲಕ್ ಸೊಪ್ಪು
ಬೆಳ್ಳುಳ್ಳಿ
ಈರುಳ್ಳಿ
ಹಾಲು
ಬೆಣ್ಣೆ ಅಥವಾ ಎಣ್ಣೆ
ಕಾಳುಮೆಣಸಿನ ಪುಡಿ
ಉಪ್ಪು
ನೀರು
ಇದನ್ನೂ ಓದಿ:
ಮಾಡುವ ವಿಧಾನ:
ಮೊದಲು ಒಂದು ಬಾಣಲೆಗೆ 1 ಚಮಚ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ 1 ನಿಮಿಷ ಬಾಡಿಸಿ. ತೊಳೆದು ಹೆಚ್ಚಿಟ್ಟುಕೊಂಡ ಪಾಲಕ್ ಸೊಪ್ಪನ್ನು ಸೇರಿಸಿ. ಸಣ್ಣ ಉರಿಯಲ್ಲಿ ಸೊಪ್ಪು ಪೂರ್ತಿ ಮೆತ್ತಗಾಗಿ, ಸುರುಟಿಕೊಳ್ಳುವವರೆಗೆ 2 ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಬಾಡಿಸಿ ಒಲೆಯನ್ನು ಆಫ್ ಮಾಡಬೇಕು.
ನಂತರ ಬಾಡಿಸಿದ ಪಾಲಕ್ ಮಿಶ್ರಣವನ್ನು ಪೂರ್ತಿಯಾಗಿ ತಣ್ಣಗಾಗಲು ಬಿಡಬೇಕು. ನಂತರ, ಇದನ್ನು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪವೂ ನೀರು ಹಾಕದೆ ನುಣ್ಣಗೆ ರುಬ್ಬಬೇಕು. ಬಳಿಕ ರುಬ್ಬಿದ ಪಾಲಕ್ ಪೇಸ್ಟ್ ಅನ್ನು ಮರಳಿ ಅದೇ ಬಾಣಲೆಗೆ ಹಾಕಿ. ಅದಕ್ಕೆ 1.5 ಕಪ್ ನೀರು ಮತ್ತು ಅರ್ಧ ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ ಮಧ್ಯಮ ಉರಿಯಲ್ಲಿ ಜಸ್ಟ್ 2 ನಿಮಿಷಗಳ ಕಾಲ ಕುದಿಸಿ ಒಲೆಯಿಂದ ಕೆಳಗಿಳಿಸಿದರೆ ಬಿಸಿಬಿಸಿಯಾದ, ಸೂಪರ್ ಸಿಂಪಲ್ ಪಾಲಕ್ ಸೂಪ್ ಸಿದ್ಧ!



