ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚುತ್ತಿರುವ ಕೆಲಸದ ಒತ್ತಡ ಹಾಗೂ ಬದಲಾದ ಜೀವನಶೈಲಿಯಿಂದಾಗಿ ಸರ್ಕಾರಿ ನೌಕರರಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯಾಘಾತದಂತಹ ಗಂಭೀರ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ರಾಜ್ಯ ಸರ್ಕಾರ ಬೃಹತ್ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲೇ 40 ವರ್ಷ ದಾಟಿದ ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ.
ಯೋಜನೆಯ ಪ್ರಮುಖ ಷರತ್ತುಗಳು
40ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ವರ್ಗದ ರಾಜ್ಯ ಸರ್ಕಾರಿ ನೌಕರರಿಗೆ ಈ ಸೌಲಭ್ಯ ಅನ್ವಯಿಸುತ್ತದೆ. ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಗೆ ಒಳಪಟ್ಟಿರುವ ಎಲ್ಲಾ ನೌಕರರಿಗೆ ಪ್ರತಿ ವರ್ಷದಲ್ಲಿ ಒಂದು ಬಾರಿ ಇದು ನಗದು ರಹಿತವಾಗಿ ಲಭ್ಯವಿರಲಿದೆ.
ಸ್ವ-ಇಚ್ಛೆಯಿಂದ ಈ ಯೋಜನೆಯಿಂದ ಹೊರಗುಳಿದ ನೌಕರರಿಗೆ ಹಾಗೂ ನೌಕರರ ಕುಟುಂಬದ ಅವಲಂಬಿತ ಸದಸ್ಯರಿಗೆ ಈ ವಾರ್ಷಿಕ ತಪಾಸಣೆ ಅನ್ವಯಿಸುವುದಿಲ್ಲ. ಸರ್ಕಾರಿ ಆಸ್ಪತ್ರೆಗಳು, ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಹಾಗೂ ‘ಆರೋಗ್ಯ ಸಂಜೀವಿನಿ ಯೋಜನೆ’ಯಡಿ (KASS) ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶವಿದೆ.
ತಪಾಸಣಾ ವೆಚ್ಚದ ಮಿತಿ
ನೌಕರರು ಆಸ್ಪತ್ರೆಗಳಿಗೆ ಯಾವುದೇ ಹಣ ಪಾವತಿಸುವ ಅಗತ್ಯವಿರುವುದಿಲ್ಲ. ಇದರ ಸಂಪೂರ್ಣ ಪ್ಯಾಕೇಜ್ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಪುರುಷ ನೌಕರರಿಗೆ: ಗರಿಷ್ಠ 2,000 ವರೆಗಿನ ಉಚಿತ ಪ್ಯಾಕೇಜ್.
ಮಹಿಳಾ ನೌಕರರಿಗೆ: ಗರಿಷ್ಠ 2,200 ವರೆಗಿನ ಉಚಿತ ಪ್ಯಾಕೇಜ್.
ಇದನ್ನೂ ಓದಿ:
ಲಭ್ಯವಿರುವ ಉಚಿತ ವೈದ್ಯಕೀಯ ಪರೀಕ್ಷೆಗಳು
ಸರ್ಕಾರದ ಈ ವಾರ್ಷಿಕ ತಪಾಸಣಾ ಯೋಜನೆಯಡಿ ನೌಕರರ ಸಂಪೂರ್ಣ ದೈಹಿಕ ಮೌಲ್ಯಮಾಪನ ಮಾಡಲಾಗುತ್ತದೆ. ದೈಹಿಕ ತಪಾಸಣೆ, ಕಣ್ಣು ಮತ್ತು ಹಲ್ಲಿನ ಸಂಪೂರ್ಣ ತಪಾಸಣೆ. ಮಧುಮೇಹ, ಲಿಪಿಡ್ ಪ್ರೊಫೈಲ್, ರಕ್ತಹೀನತೆ ಪರೀಕ್ಷೆಗಳು. ಕಿಡ್ನಿ, ಲಿವರ್ ಮತ್ತು ಥೈರಾಯ್ಡ್ ಕಾರ್ಯಕ್ಷಮತೆಯ ಪರೀಕ್ಷೆ. ಇಸಿಜಿ ಹಾಗೂ ಶ್ವಾಸಕೋಶದ ದೈಹಿಕ ಮೌಲ್ಯಮಾಪನ. ಎದೆಯ ಎಕ್ಸ್-ರೇ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್. ಸ್ತ್ರೀರೋಗ ತಪಾಸಣೆ, ಗರ್ಭಕಂಠದ ಕ್ಯಾನ್ಸರ್ ಪತ್ತೆಯ ಪ್ಯಾಪ್ ಸ್ಮೀಯರ್ ಮತ್ತು ಸ್ತನ ಕ್ಯಾನ್ಸರ್ ಪತ್ತೆಯ ಮ್ಯಾಮೊಗ್ರಾಫಿ ಪರೀಕ್ಷೆಗಳು ಲಭ್ಯವಿರುತ್ತವೆ.
ಕೆಲಸದ ಒತ್ತಡದ ನಡುವೆ ನೌಕರರ ಆರೋಗ್ಯ ರಕ್ಷಣೆ ಮಾಡಲು ಮುಂದಾಗಿರುವ ಸರ್ಕಾರದ ಈ ಹೊಸ ಹೆಜ್ಜೆಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಧನ್ಯವಾದ ಅರ್ಪಿಸಿದ್ದು, ಲಕ್ಷಾಂತರ ನೌಕರರ ಕುಟುಂಬಗಳಿಗೆ ಇದು ದೊಡ್ಡ ನೆಮ್ಮದಿ ತಂದಿದೆ ಎಂದು ಹರ್ಷವ್ಯಕ್ತ ಪಡಿಸಿದ್ದಾರೆ.



